ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಭೀಕರ ಬಸ್ ಅಪಘಾತ | Hosa Suddi

ದೇಶ

ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಭೀಕರ ಬಸ್ ಅಪಘಾತ

Published

on

ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 16 ಮಂದಿ ಮೃತಪಟ್ಟಿದ್ದು, 18 ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಅಪಘಾತಕ್ಕೀಡಾದ ಬಸ್ಸಿನಲ್ಲಿ ಒಟ್ಟು 34 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಂಸ್ಥೆಯ ಮುಖ್ಯಸ್ಥ ಬುಡಿಯೊನೊ ಮಾಹಿತಿ ನೀಡಿದಂತೆ, ಈ ಬಸ್ ರಾಜಧಾನಿ ಜಕಾರ್ತಾದಿಂದ ಪ್ರಾಚೀನ ನಗರ ಯೋಗಕರ್ತಾ ಕಡೆಗೆ ತೆರಳುತ್ತಿತ್ತು. ಜಾವಾದ ಸೆಮಾರಾಂಗ್ ಕ್ರಾಪ್ಯಾಕ್ ಕೇಂದ್ರ ಟೋಲ್ ರಸ್ತೆ ಬಳಿ ಇರುವ ನಿರ್ಗಮನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದು ಪಕ್ಕಕ್ಕೆ ಉರುಳಿಬಿದ್ದಿದೆ.

ಡಿಕ್ಕಿಯ ರಭಸಕ್ಕೆ ಬಸ್‌ನೊಳಗಿದ್ದ ಅನೇಕ ಪ್ರಯಾಣಿಕರು ಹೊರಗೆ ತೂರಿಬಿದ್ದಿದ್ದು, ಕೆಲವರು ಬಸ್ ಮತ್ತು ಕಾಂಕ್ರೀಟ್ ತಡೆಗೋಡೆ ಮಧ್ಯೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ 10 ಮಂದಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಉಸಿರು ಚೆಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಮಾಹಿತಿ ದೊರೆತ 40 ನಿಮಿಷಗಳೊಳಗೆ ಶೋಧ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದವು. ಪೊಲೀಸರು, ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಗಾಯಾಳುಗಳನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರು.

ಗಾಯಗೊಂಡಿರುವ 18 ಪ್ರಯಾಣಿಕರಲ್ಲಿ 13 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದ್ದು, ಚಾಲಕನ ಅಜಾಗರೂಕತೆ ಅಥವಾ ತಾಂತ್ರಿಕ ದೋಷವೇ ಕಾರಣವೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳೀಯ ಟಿವಿ ಚಾನೆಲ್‌ಗಳು ಅಪಘಾತದ ದೃಶ್ಯಗಳನ್ನು ಪ್ರಸಾರ ಮಾಡಿದ್ದು, ಈ ಘಟನೆ ದೇಶಾದ್ಯಂತ ತೀವ್ರ ಆಘಾತ ಮೂಡಿಸಿದೆ. ರಸ್ತೆ ಸುರಕ್ಷತೆ ಹಾಗೂ ದೂರ ಪ್ರಯಾಣದ ವೇಳೆ ಕಟ್ಟುನಿಟ್ಟಿನ ನಿಯಮಗಳ ಅಗತ್ಯವಿದೆ ಎಂಬ ಚರ್ಚೆ ಮತ್ತೆ ಜೋರಾಗಿದೆ.

Trending

Exit mobile version