IPL 2026 Mini Auction: ₹25.20 ಕೋಟಿಗೆ ಕೆಕೆಆರ್ ಪಾಲಾದ ಕೆಮರೂನ್ ಗ್ರೀನ್, ಲಿವಿಂಗ್‌ಸ್ಟೋನ್–ರಚಿನ್ ಅನ್ಸೋಲ್ಡ್ | Hosa Suddi

ಕ್ರೀಡೆ

IPL 2026 Mini Auction: ₹25.20 ಕೋಟಿಗೆ ಕೆಕೆಆರ್ ಪಾಲಾದ ಕೆಮರೂನ್ ಗ್ರೀನ್, ಲಿವಿಂಗ್‌ಸ್ಟೋನ್–ರಚಿನ್ ಅನ್ಸೋಲ್ಡ್

Published

on

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮಿನಿ ಹರಾಜು ಮಂಗಳವಾರ ಮಧ್ಯಾಹ್ನ 2:30ಕ್ಕೆ ಅಬುಧಾಬಿಯಲ್ಲಿ ಆರಂಭಗೊಂಡಿದೆ. ಈ ಮಿನಿ ಹರಾಜಿನಲ್ಲಿ ಒಟ್ಟು 369 ಕ್ರಿಕೆಟಿಗರು ಅದೃಷ್ಟ ಪರೀಕ್ಷೆಗೆ ಇಳಿದಿದ್ದು, 10 ತಂಡಗಳ ಬಳಿ ಒಟ್ಟು 77 ಸ್ಲಾಟ್ಗಳು ಖಾಲಿ ಇವೆ. ಎಲ್ಲ ತಂಡಗಳು ಸೇರಿ ಸುಮಾರು ₹237 ಕೋಟಿ ರೂ.ಗಳ ಹಣವನ್ನು ಖರ್ಚು ಮಾಡಲು ಸಿದ್ಧವಾಗಿವೆ.

ಈ ಬಾರಿ ಹರಾಜಿಗಾಗಿ 1,355 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದು, ಅವರಲ್ಲಿ 369 ಆಟಗಾರರ ಹೆಸರು ಅಂತಿಮ ಪಟ್ಟಿಗೆ ಆಯ್ಕೆಯಾಗಿದೆ. ಹರಾಜಿನ ಆರಂಭದಲ್ಲೇ ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ.

ಹರಾಜಿನ ಹೈಲೈಟ್ ಎಂದರೆ ಆಸ್ಟ್ರೇಲಿಯಾದ ಆಲ್ರೌಂಡರ್ ಕೆಮರೂನ್ ಗ್ರೀನ್. 2024ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದ ಗ್ರೀನ್ ಗಾಯದ ಕಾರಣದಿಂದ 2025ರ ಹರಾಜಿನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಐಪಿಎಲ್ 2026 ಮಿನಿ ಹರಾಜಿನಲ್ಲಿ ಅವರು ₹25.20 ಕೋಟಿ ರೂ.ಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪಾಲಾಗಿದ್ದಾರೆ. ಮುಂಬೈ ಇಂಡಿಯನ್ಸ್, ಸಿಎಸ್‌ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ತೀವ್ರ ಪೈಪೋಟಿಯ ನಡುವೆಯೂ ಕೆಕೆಆರ್ ಗ್ರೀನ್ ಅವರನ್ನು ಪಡೆದುಕೊಂಡಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರ ಎಂಬ ದಾಖಲೆ ಗ್ರೀನ್ ಹೆಸರಿಗೆ ಸೇರಿದೆ.

ಇನ್ನೊಂದೆಡೆ, ಐಪಿಎಲ್ 2025 ಚಾಂಪಿಯನ್ ಆರ್‌ಸಿಬಿ ತಂಡದ ಭಾಗವಾಗಿದ್ದ ಲಿಯಾಮ್ ಲಿವಿಂಗ್‌ಸ್ಟೋನ್, ಸಿಎಸ್‌ಕೆ ಆಟಗಾರ ರಚಿನ್ ರವೀಂದ್ರ ಹಾಗೂ ವಿಯಾನ್ ಮುಲ್ಡರ್ ಈ ಬಾರಿ ಅನ್ಸೋಲ್ಡ್ ಆಗಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಜೆಕ್ ಫ್ರೇಸರ್ ಮೆಕ್‌ಗರ್ಕ್ ಮತ್ತು ಭಾರತದ ಯುವ ಬ್ಯಾಟರ್ ಪೃಥ್ವಿ ಶಾ ಕೂಡ ಹರಾಜಿನಲ್ಲಿ ಯಾರಿಗೂ ಸೇರಲಿಲ್ಲ.

ಹರಾಜು ಇನ್ನೂ ಮುಂದುವರಿದಿದ್ದು, ಮುಂದಿನ ಸುತ್ತುಗಳಲ್ಲಿ ಯಾವ ತಂಡ ಯಾರನ್ನು ಪಡೆಯಲಿದೆ ಎಂಬುದರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ.

Trending

Exit mobile version