ಕ್ರೀಡೆ
IPL 2026 Auction: ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರು ಕಾಣೆಯಾಗಿ ಅಭಿಮಾನಿಗಳಿಗೆ ಶಾಕ್!
ಅಬುಧಾಬಿ: ಐಪಿಎಲ್ 2026ರ ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ಜರುಗಲಿದ್ದು, ಈ ಬಾರಿ ದಾಖಲೆ ಸಂಖ್ಯೆಯ 1,355 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ ಎಲ್ಲರನ್ನೂ ಆಶ್ಚರ್ಯಕ್ಕೆಗೊಳಿಸಿದ್ದು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರು ಪಟ್ಟಿಯಲ್ಲಿ ಕಾಣಿಸದಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡವು ಮ್ಯಾಕ್ಸ್‌ವೆಲ್ ಅವರನ್ನು ₹4.2 ಕೋಟಿಗೆ ಖರೀದಿಸಿದ್ದರೂ, ಅವರು ಕಳೆದ ಐಪಿಎಲ್ ಸೀಸನ್‌ನಲ್ಲಿ ಕೇವಲ 48 ರನ್ ಮತ್ತು 4 ವಿಕೆಟ್ ಮಾತ್ರ ಪಡೆದಿದ್ದರು. ನಂತರ ಗಾಯದಿಂದ ಉಳಿದ ಟೂರ್ನಿಯನ್ನು ಕಳೆದುಕೊಂಡಿದ್ದ ಅವರು ಈ ಬಾರಿ ಹರಾಜಿಗೆ ಹೆಸರು ನೋಂದಾಯಿಸದೇ ಹಿಂದೆ ಸರಿದಿದ್ದಾರೆ ಎಂದು ಕ್ರಿಕ್‌ಇನ್ಫೋ ವರದಿ ತಿಳಿಸಿದೆ.
ಇದಕ್ಕೂ ಮುನ್ನ ಫ್ರಾಂಚೈಸಿಗಳು ನವೆಂಬರ್ 15ರೊಳಗೆ ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು BCCIಗೆ ಸಲ್ಲಿಸಿದ್ದವು. ಫಾಫ್ ಡು ಪ್ಲೆಸಿಸ್, ಆಂಡ್ರೆ ರಸೆಲ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ತಂಡಗಳು ಬಿಡುಗಡೆ ಮಾಡಿದ್ದವು. ರಸೆಲ್ ಐಪಿಎಲ್‌ಗೆ ಗುಡ್‌ಬೈ ಹೇಳಿ KKRನಲ್ಲಿ ಪವರ್‌ಹೌಸ್ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ. ಫಾಫ್ ಹರಾಜಿನಿಂದ ಹಿಂದೆ ಸರಿದು PSL ಕಡೆ ಮುಖ ಮಾಡಿದ್ದಾರೆ.
45 ಆಟಗಾರರು ₹2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬರುತ್ತಿದ್ದಾರೆ. ಇವರಲ್ಲಿ 2 ಭಾರತೀಯರು (ವೆಂಕಟೇಶ್ ಅಯ್ಯರ್, ರವಿ ಬಿಷ್ಣೋಯ್) ಮತ್ತು 43 ವಿದೇಶಿಯರು. ಈ ಬಾರಿ 77 ಸ್ಲಾಟ್‌ಗಳು ಖಾಲಿ, ಅದರಲ್ಲಿ 31 ವಿದೇಶಿ ಆಟಗಾರರಿಗೆ ಮೀಸಲು.
ಎಲ್ಲಾ ತಂಡಗಳಲ್ಲಿ ಅತಿ ಹೆಚ್ಚು ಪರ್ಸ್ ಹೊಂದಿರುವುದು KKR, ಇವರ ಬಳಿ ₹64.30 ಕೋಟಿ ಉಳಿದಿದೆ. CSK ಎರಡನೇ ಅತಿ ದೊಡ್ಡ ಪರ್ಸ್ ಹೊಂದಿದ್ದು ₹43.40 ಕೋಟಿ ಉಳಿಸಿಕೊಂಡಿದೆ. ಡಿಸೆಂಬರ್ 5ರೊಳಗೆ ತಂಡಗಳು ಶಾರ್ಟ್‌ಲಿಸ್ಟ್ ಸಲ್ಲಿಸಬೇಕು.
ಐಪಿಎಲ್ 2026ರ ದೊಡ್ಡ ಹೆಡ್ಲೈನ್ — ಕ್ಯಾಮೆರಾನ್ ಗ್ರೀನ್!
ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ₹2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಜೋರಾಗಿದೆ.
₹2 ಕೋಟಿ ಮೂಲ ಬೆಲೆಯ ಪ್ರಮುಖ ಆಟಗಾರರು:
ರವಿ ಬಿಷ್ಣೋಯ್, ವೆಂಕಟೇಶ್ ಅಯ್ಯರ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಮುಸ್ತಫಿಜುರ್ ರೆಹಮான், ಲಿಯಾಮ್ ಲಿವಿಂಗ್‌ಸ್ಟೋನ್, ರಾಚಿನ್ ರವೀಂದ್ರ, ಎನ್‌ರಿಚ್ ನೋರ್ಟ್ಜೆ, ರಿಲೀ ರೂಸೋ, ವನಿಂದು ಹಸರಂಗ, ಮಥೀಶ ಪತಿರಾನ, ಮಹೇಶ್ ತೀಕ್ಷಣ, ಜೇಸನ್ ಹೋಲ್ಡರ್ ಮತ್ತು ಅಲ್ಜಾರಿ ಜೋಸೆಫ್ ಸೇರಿ ಹಲವರು.