ರಕ್ಷಣೆ–ಬಾಹ್ಯಾಕಾಶ–ವ್ಯಾಪಾರ: ಇಟಲಿ–ಭಾರತ ಸಂಬಂಧಗಳಿಗೆ ದೊಡ್ಡ ಬೂಸ್ಟ್! | Hosa Suddi

ದೇಶ

ರಕ್ಷಣೆ–ಬಾಹ್ಯಾಕಾಶ–ವ್ಯಾಪಾರ: ಇಟಲಿ–ಭಾರತ ಸಂಬಂಧಗಳಿಗೆ ದೊಡ್ಡ ಬೂಸ್ಟ್!

Published

on

ಪ್ರಧಾನಿ ಮೋದಿ ಭೇಟಿಯಾದ ಇಟಲಿ ಉಪ ಪ್ರಧಾನಿ ತಜಾನಿ

ನವದೆಹಲಿ: ಇಟಲಿಯ ಉಪಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಆಂಟೋನಿಯೊ ತಜಾನಿ ಅವರು ಮೂರು ದಿನಗಳ ಭಾರತ ಪ್ರವಾಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿ‌ನಲ್ಲಿ ಭೇಟಿಯಾದರು. ಭಾರತ–ಇಟಲಿ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025–2029ರಲ್ಲಿ ಸಾಧಿಸಿರುವ ಪ್ರಗತಿಯನ್ನು ಅವರು ಮೆಚ್ಚಿದರು.

ತಜಾನಿ ಅವರ ಭೇಟಿಯು ವ್ಯಾಪಾರ, ಹೂಡಿಕೆ, ಸಂಶೋಧನೆ, ನವೀನತೆ, ರಕ್ಷಣಾ ಸಹಕಾರ, ಬಾಹ್ಯಾಕಾಶ, ಭಯೋತ್ಪಾದನೆ ನಿಗ್ರಹ ಮತ್ತು ಶಿಕ್ಷಣ ಸೇರಿದಂತೆ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಹೆಜ್ಜೆ ಎಂದಿದ್ದಾರೆ ಪ್ರಧಾನಿ ಮೋದಿ. ಎರಡೂ ದೇಶಗಳು ಕೈಗೊಂಡಿರುವ ಪೂರ್ವಭಾವಿ ಕ್ರಮಗಳು ಸಂಬಂಧಗಳ ವಿಸ್ತರಣೆಗೆ ಹೊಸ ದಾರಿಯನ್ನು ತೆರೆದಿವೆ ಎಂದು ಅವರು ತಿಳಿಸಿದ್ದಾರೆ.

ಭೇಟಿ ಸಂದರ್ಭದಲ್ಲಿ ತಜಾನಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಕೂಡ ಭೇಟಿಯಾಗಿ ಪ್ರಮುಖ ಜಾಗತಿಕ ಮತ್ತು ಪ್ರಾದೇಶಿಕ ವಿಚಾರಗಳ ಕುರಿತು ಚರ್ಚಿಸಿದರು. ರಾಜಕೀಯ, ರಕ್ಷಣಾ ತಂತ್ರಜ್ಞಾನ, ಕಡಲ ಭದ್ರತೆ, ಚಲನಶೀಲತೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಜಂಟಿ ಕಾರ್ಯತಂತ್ರ ರೂಪಿಸುವ ಬಗ್ಗೆ ಒಪ್ಪಂದ ನಡೆಯಿತು.

ಜೈಶಂಕರ್ ಅವರು ಭಾರತ–ಇಟಲಿ ಸ್ನೇಹವು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಜಾಗತಿಕ ಶಾಂತಿಗೆ ಬದ್ಧತೆಯ ಮೇಲೆ ನಿರ್ಮಿತವಾಗಿದೆ ಎಂದು ತಿಳಿಸಿದರು. ಇತ್ತೀಚಿನ ನವದೆಹಲಿ ಭಯೋತ್ಪಾದನಾ ದಾಳಿಯ ನಂತರ ಇಟಲಿ ನೀಡಿದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಇಟಲಿ ಭಾರತದ ಪ್ರಮುಖ ಪಾಲುದಾರವಾಗಿದ್ದು, ವಿಶೇಷವಾಗಿ ಎಫ್ಎಟಿಎಫ್ ಮುಖಾಂತರ ಸಹಕಾರ ಪ್ರಮುಖವಾಗಿದೆ. ಪಶ್ಚಿಮ ಏಷ್ಯಾ ಪರಿಸ್ಥಿತಿ ಮತ್ತು ರಷ್ಯಾ–ಉಕ್ರೇನ್ ಸಂಘರ್ಷಗಳ ಬಗ್ಗೆ ಎರಡೂ ದೇಶಗಳ ನಾಯಕರು ವಿಶ್ಲೇಷಣೆ ನಡೆಸಿ ಮುಂದಿನ ಸಹಕಾರದ ಮಾರ್ಗಗಳನ್ನು ಚರ್ಚಿಸಿದರು.

Trending

Exit mobile version