ಕ್ರೀಡೆ
ಯುವ ಕ್ರೀಡಾ ಪ್ರತಿಭೆಗಳಿಗೆ ನಿರಂತರ ಬೆಂಬಲ: ಡಾ. ಶಂಕರ್
ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಆಲ್ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಭವ್ಯ ಗೌರವ ಸಮಾರಂಭವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಜೈನ್ ವಿಶ್ವವಿದ್ಯಾಲಯದ CMS ಬಿಸಿನೆಸ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆಯಿತು.
ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಈಜು, ತೂಕ ಎತ್ತುವಿಕೆ, ಕರಾಟೆ ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಆಲ್ ಇಂಡಿಯಾ ಯೂನಿವರ್ಸಿಟಿ ಮತ್ತು ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಒಲಿಂಪಿಯನ್ ಈಜುಗಾರ ಶ್ರೀ ಹರಿ ನಟರಾಜ್ ಅವರಿಗೆ ₹4.05 ಲಕ್ಷ ನಗದು ಬಹುಮಾನ ನೀಡಲಾಯಿತು. ಅಂತರರಾಷ್ಟ್ರೀಯ ಈಜುಗಾರ ಶ್ರೀ ಸೋಹನ್ ಗಂಗೂಲಿ ಅವರಿಗೆ ₹3.10 ಲಕ್ಷ, ಭಾವ್ಯ ಸಚ್ದೇವ ಅವರಿಗೆ ₹2.75 ಲಕ್ಷ, ಹಾಗೂ ಶೃಂಗಿ ರಾಜೇಶ್ ಬಾಂಡೆಕರ್ ಅವರಿಗೆ ₹2.50 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಇದಲ್ಲದೆ, ವಿವಿಧ ಯೂನಿವರ್ಸಿಟಿ ಚಾಂಪಿಯನ್‌ಶಿಪ್‌ಗಳು ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ವಿಜೇತರಾಗಿರುವ ಮತ್ತು ರನ್ನರ್‌ಅಪ್‌ಗಳಾಗಿರುವ ಕ್ರೀಡಾಪಟುಗಳಿಗೆ ಒಟ್ಟು ₹35 ಲಕ್ಷ ನಗದು ಬಹುಮಾನ ವಿತರಿಸಲಾಯಿತು.
ಈ ಸಮಾರಂಭದಲ್ಲಿ ಜೈನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ಅಧ್ಯಕ್ಷರು ಹಾಗೂ ಜೈನ್ ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ಚೆನ್ರಾಜ್ ರಾಯಚಂದ್, ಪ್ರೋ ವೈಸ್ ಚಾನ್ಸಲರ್ ಡಾ. ದಿನೇಶ್ ನಿಲ್ಕಾಂತ್, ಜೈನ್ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಡಾ. ಯು.ವಿ. ಶಂಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಡಾ. ಯು.ವಿ. ಶಂಕರ್ ಅವರು, ಜೈನ್ ವಿಶ್ವವಿದ್ಯಾಲಯವು ಸದಾ ಕ್ರೀಡೆಗೂ ಮತ್ತು ಶಿಕ್ಷಣಕ್ಕೂ ಸಮಾನ ಮಹತ್ವ ನೀಡಿದ್ದು, ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿದೆ. ಜೈನ್ ವಿಶ್ವವಿದ್ಯಾಲಯದ ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಯುವ ಪ್ರತಿಭೆಗಳಿಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದು, ದೇಶದ ಗೌರವವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.