ಜಪಾನ್‌ನ ಸಕುರಾಜಿಮಾ ಜ್ವಾಲಾಮುಖಿ ಭಾರೀ ಸ್ಫೋಟ: 4,400 ಮೀಟರ್‌ಗಳವರೆಗೆ ಬೂದಿ | Hosa Suddi

ದೇಶ

ಜಪಾನ್‌ನ ಸಕುರಾಜಿಮಾ ಜ್ವಾಲಾಮುಖಿ ಭಾರೀ ಸ್ಫೋಟ: 4,400 ಮೀಟರ್‌ಗಳವರೆಗೆ ಬೂದಿ

Published

on

ಜಪಾನ್​ ನಲ್ಲಿ ಜ್ವಾಲಾಮುಖಿ ಸ್ಫೋಟ (ANI)

ಟೋಕಿಯೋ: ನೈಋತ್ಯ ಜಪಾನ್‌ನ ಕಗೋಶಿಮಾ ಪ್ರಾಂತ್ಯದಲ್ಲಿರುವ ಪ್ರಸಿದ್ಧ ಸಕುರಾಜಿಮಾ ಜ್ವಾಲಾಮುಖಿ ಭಾನುವಾರ ಮುಂಜಾನೆ ಸ್ಫೋಟಗೊಂಡಿದ್ದು, ಸುಮಾರು 4,400 ಮೀಟರ್‌ಗಳ ಎತ್ತರದವರೆಗೆ ಬೂದಿ ಮತ್ತು ಹೊಗೆ ಆಕಾಶಕ್ಕೆ ಚಿಮ್ಮಿದೆ ಎಂದು ಕ್ಯೋಡೋ ನ್ಯೂಸ್ ಹಾಗೂ ಹವಾಮಾನ ಸಂಸ್ಥೆಗಳು ವರದಿ ಮಾಡಿವೆ.

ಪ್ರಾಥಮಿಕ ಸ್ಫೋಟದ ನಂತರವೂ ಜ್ವಾಲಾಮುಖಿ ಚಟುವಟಿಕೆ ಮುಂದುವರಿದಿದ್ದು, ಕಗೋಶಿಮಾ, ಕುಮಾಮೊಟೊ ಮತ್ತು ಮಿಯಾಜಾಕಿ ಪ್ರಾಂತ್ಯಗಳ ಕೆಲವು ಭಾಗಗಳಲ್ಲಿ ಬೂದಿ ಬೀಳುವ ಮುನ್ಸೂಚನೆ ನೀಡಲಾಗಿದೆ. ಸದ್ಯದ ತನಕ ಯಾವುದೇ ಸಾವು ಅಥವಾ ಗಾಯಗಳ ಮಾಹಿತಿ ಇಲ್ಲದಿರುವುದು ಸ್ಥಳೀಯರಿಗಾಗಿ ಸ್ವಲ್ಪ ನೆಮ್ಮದಿ ಮೂಡಿಸಿದೆ. ಕಟ್ಟಡಗಳು ಹಾಗೂ ಮೂಲಸೌಕರ್ಯಗಳಿಗೆ ನಷ್ಟವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸಮಯ 12:57ಕ್ಕೆ ಮಿನಾಮಿಡೇಕ್ ಕುಳಿಯಲ್ಲಿ ಸಂಭವಿಸಿದ ಈ ಸ್ಫೋಟವು, ಕಳೆದ ವರ್ಷದ ಅಕ್ಟೋಬರ್ 18 ನಂತರ ಮೊದಲ ಬಾರಿಗೆ 4,000 ಮೀಟರ್‌ಗಿಂತ ಹೆಚ್ಚಿನ ಬೂದಿ ಚಿಮ್ಮಿದ ಘಟನೆಯಾಗಿ ದಾಖಲಾಗಿದೆ. ಇತ್ತೀಚಿನ ಸ್ಫೋಟಗಳ ಸರಣಿಯಲ್ಲಿ ದೊಡ್ಡ ಬಂಡೆಗಳು ಹೊರಬಿದ್ದರೂ, ಯಾವುದೇ ಪೈರೋಕ್ಲಾಸ್ಟಿಕ್ ಹರಿವು ಕಂಡುಬಂದಿಲ್ಲ.

ಜಪಾನ್‌ನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲೊಂದು ಸಕುರಾಜಿಮಾ, ಕ್ಯುಶು ದ್ವೀಪದ ಒಸುಮಿ ಪರ್ಯಾಯ ದ್ವೀಪಕ್ಕೆ ಸಂಪರ್ಕ ಹೊಂದಿದೆ. 1914ರ ಲಾವಾ ಹರಿವಿನ ನಂತರ ಅದು ಭೂ ಸೇತುವೆಯ ಮೂಲಕ ಮುಖ್ಯ ಭೂಭಾಗಕ್ಕೆ ಜೋಡಣೆಯಾಯಿತು.

ಇದೇ ವೇಳೆ, ಜಪಾನ್ ಸರ್ಕಾರ ಆಗಸ್ಟ್ 30ರಂದು ಮೌಂಟ್ ಫ್ಯೂಜಿಯ ದೊಡ್ಡ ಸ್ಫೋಟದ ಸಿಮ್ಯುಲೇಟೆಡ್ ವಿಡಿಯೋ ಬಿಡುಗಡೆ ಮಾಡಿದ್ದು, ವಿದ್ಯುತ್, ಒಳಚರಂಡಿ, ರಸ್ತೆ–ರೈಲು ಸೇರಿದಂತೆ ಮೂಲಸೌಕರ್ಯಗಳಿಗೆ ದೊಡ್ಡ ಹಾನಿ ಸಂಭವಿಸುವ ಸಾಧ್ಯತೆಗಳನ್ನು ಎಚ್ಚರಿಸಿದೆ. 300 ವರ್ಷಗಳಿಗೂ ಹೆಚ್ಚು ಕಾಲ ಸ್ಫೋಟವಾಗದಿರುವುದು ಅಸಾಮಾನ್ಯ ಎಂದು ಟೋಕಿಯೋ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ತೋಶಿತ್ಸುಗು ತಿಳಿಸಿದ್ದು, ಸರಾಸರಿಯಾಗಿ ಮೌಂಟ್ ಫ್ಯೂಜಿ ಪ್ರತಿ 30 ವರ್ಷಕ್ಕೊಮ್ಮೆ ಸ್ಫೋಟಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

Trending

Exit mobile version