ದೇಶ
‘ದ್ವಿಪಾತ್ರ ಅಭಿನಯ’ ಡಿಕೆ ಶಿವಕುಮಾರ್? ಜೆಡಿಎಸ್ ಝುಳುಕು ಟ್ವೀಟ್ ವೈರಲ್
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪವರ್ ಫೈಟ್ ಹೊಸ ತಿರುವು ಪಡೆದುಕೊಂಡಿದ್ದು, ಡೆಪ್ಯುಟಿ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ – ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನದ ಕುರಿತು ಹೊರಗೆ ಎಲ್ಲವೂ ಸಾಮಾನ್ಯವಾಗಿರುವಂತೆ ಹೇಳಲಾಗುತ್ತಿದ್ದರೂ, ಒಳಗೊಳಗೇ ಗೊಂದಲ ಗಾಢವಾಗುತ್ತಿದೆ ಎಂದು ಜೆಡಿಎಸ್ ವ್ಯಂಗ್ಯ ಟೀಕೆ ಮಾಡಿದೆ.
ಕಳೆದ ಹಲವಾರು ದಿನಗಳಿಂದ ಕಾಂಗ್ರೆಸ್ ಶಿಬಿರದಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ಗಳ ಸರಮಾಲೆ ನಡೆಯುತ್ತಿದ್ದು, ಬೆಂಬಲಿತ ಶಾಸಕರನ್ನು ದೆಹಲಿಗೆ ಕಳುಹಿಸುವ ಕ್ರಮ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವೇಳೆ ಜೆಡಿಎಸ್ ತನ್ನ ಅಧಿಕೃತ ಟ್ವೀಟರ್ ಖಾತೆ ಮೂಲಕ ಡಿಕೆ ಶಿವಕುಮಾರ್ ಅವರ “ಡಬಲ್ ಆಕ್ಟಿಂಗ್” ಮೇಲೆ ಕಿಡಿಕಾರಿದೆ.
ಜೆಡಿಎಸ್ ಟ್ವೀಟ್ನಲ್ಲಿ ಹೀಗೆ ಹೇಳಿದೆ:
“ಡಬಲ್ ಆಕ್ಟಿಂಗ್ ಡಿಕೆ ಶಿವಕುಮಾರ್ 2019ರಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಹೇಗೆ ಬೆನ್ನಿಗೆ ಚೂರಿ ಹಾಕಿ ‘ದ್ವಿಪಾತ್ರ ಅಭಿನಯ’ ಮಾಡಿದ್ದರೆಂಬುದು ಎಲ್ಲರಿಗೂ ತಿಳಿದ ವಿಷಯ. ಇಂದು ಕುರ್ಚಿಗಾಗಿ ಬೆಂಬಲಿತ ಶಾಸಕರನ್ನು ದೆಹಲಿಗೆ ಕಳಿಸಿ ಬಹಿರಂಗ ಹೇಳಿಕೆ ಕೊಡಿಸಲು ಬ್ಲಾಕ್ಮೇಲ್ ಮಾಡುತ್ತಿರುವುದು ಯಾರು? ಬೆಂಬಲಿಗರಿಗೆ ನೋಟೀಸ್ ನೀಡುವ ನಾಟಕ ಮಾಡುತ್ತಿರುವುದು ಯಾರು? ರಾಜ್ಯದ ಜನರು ನಿಮ್ಮ ಈ ‘ದ್ವಿಪಾತ್ರ ಅಭಿನಯ’ವನ್ನು ನೋಡುತ್ತಿದ್ದಾರೆ ಡಬಲ್ ಗೇಮ್ ಡಿಕೆಶಿ.” ಎಂದು ಜೆಡಿಎಸ್ ಆರೋಪಿಸಿದೆ.
ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ – ಡಿಸಿಎಂ ಅಧಿಕಾರ ಹಂಚಿಕೆ ಕುರಿತ ತರ್ಕ-ವಿತರ್ಕ ಈಗ ಮತ್ತಷ್ಟು ಗಂಭೀರ ಹಂತ ತಲುಪಿರುವಂತೆ ರಾಜಕೀಯ ವಲಯ ಅಂದಾಜು ಮಾಡುತ್ತಿದೆ. ಜೆಡಿಎಸ್ ಈ ಆರೋಪಗಳ ಮೂಲಕ ಕಾಂಗ್ರೆಸ್ ಆಂತರಿಕ ರಾಜಕೀಯಕ್ಕೆ ಮತ್ತಷ್ಟು ಬಣ್ಣ ತುಂಬಿದಂತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕುರ್ಚಿ ರಾಜಕೀಯ ಯಾವ ದಿಕ್ಕಿಗೆ ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.