ಅಪರಾಧ
ದಾವಣಗೆರೆಯಲ್ಲಿ ಜೆಡಿಎಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ!
ದಾವಣಗೆರೆ: ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೆಡಿಎಸ್ ಮುಖಂಡನ ಮೇಲೆ ಗುರುವಾರ ಸಂಜೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆಯಿಂದ ಪ್ರದೇಶದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
ಸಾಮಾಜಿಕ ಹೋರಾಟಗಾರ ಟಿ. ಅಸ್ಗರ್ ಎಂಬ ಜೆಡಿಎಸ್ ಮುಖಂಡರೇ ಹಲ್ಲೆಗೆ ಗುರಿಯಾಗಿದ್ದು, ಬಾಷಾ ನಗರ ಐದನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಆರೋಪಿಗಳಾದ ಖಾಲಿದ್ ಪೈಲ್ವಾನ್ ಹಾಗೂ ಅವರ ಬೆಂಬಲಿಗರು ಹಳೆಯ ವೈಷಮ್ಯದಿಂದಾಗಿ ಅಸ್ಗರ್‌ರ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಅಸ್ಗರ್ ಹಾಗೂ ಖಾಲಿದ್ ಪೈಲ್ವಾನ್ ನಡುವಿನ ರಾಜಿ ಪಂಚಾಯತ್ ವಿಚಾರದ ಹಿನ್ನಲೆಯಲ್ಲಿ ಸಣ್ಣಪುಟ್ಟ ವೈಮನಸ್ಸು ಇತ್ತು. ಅದೇ ಕಾರಣದಿಂದ ಈ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ.
ಗಾಯಗೊಂಡ ಅಸ್ಗರ್ ಅವರನ್ನು ಮೊದಲು ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ನಂತರ ದಾಳಿ ನಡೆಸಿದವರು ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.