ದೇಶ

“ಬ್ರಿಟಿಷರು ಇದ್ದಾಗ ಗಣೇಶ ಮೆರವಣಿಗೆಗೆ ಸ್ವಾತಂತ್ರ್ಯ ಇತ್ತು, ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಇಲ್ಲ” — ಸಂಸದ ಡಾ.ಕೆ. ಸುಧಾಕರ್ ಕಿಡಿ

Published

on

ನವದೆಹಲಿ:
ಬಿಜೆಪಿ ಸಂಸದ ಡಾ.ಕೆ. ಸುಧಾಕರ್ ಅವರು ಗಣೇಶ ಮೆರವಣಿಗೆ, ಹಿಂದೂ ಹಬ್ಬಗಳು ಮತ್ತು ಹಿಂದೂಗಳ ಧಾರ್ಮಿಕ ಹಕ್ಕುಗಳ ಕುರಿತು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮದ್ದೂರುನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸುತ್ತಾ, “ಬ್ರಿಟಿಷರು ಇದ್ದಾಗಲೂ ಗಣೇಶ ಮೆರವಣಿಗೆಗೆ ಸ್ವಾತಂತ್ರ್ಯ ಇತ್ತು. ಆದರೆ ಇವತ್ತು ಕಾಂಗ್ರೆಸ್ ಸರ್ಕಾರದಲ್ಲಿ ಹಬ್ಬದ ಆಚರಣೆಗೂ ಅನುಮತಿ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಒಂದು ಕೋಮಿಗೆ ಮಾತ್ರ ಎಲ್ಲದರಿಗೂ ಅನುಮತಿ ಕೊಡಲಾಗುತ್ತದೆ, ಆದರೆ ಬಹುಸಂಖ್ಯಾತ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಾಂತಿಯುತ ಮೆರವಣಿಗೆಯಲ್ಲೂ ಗಲಭೆ ಉಂಟುಮಾಡಲಾಗುತ್ತಿದೆ,” ಎಂದು ಅವರು ದೂರಿದರು.

ಹಿಂದೂಗಳ ಹಬ್ಬಗಳು ಒಗ್ಗಟ್ಟಿನ ಪ್ರತೀಕವಾಗಿದ್ದು, “ಸ್ವಾತಂತ್ರ್ಯ ಹೋರಾಟದಲ್ಲಿಯೂ ಗಣೇಶ ಹಬ್ಬ ಸಮನ್ವಯಕ್ಕೆ ಕಾರಣವಾಗಿತ್ತು,” ಎಂಬ ನೆನಪನ್ನು ತೆರೆದುಕೊಂಡು ಅವರು “ಇವತ್ತು ಎಸ್‌ಪಿ ಅನುಮತಿ ಇಲ್ಲದೆ ಸ್ಪೀಕರ್ ಹಾಕಿಕೊಳ್ಳಲಾಗದ ಪರಿಸ್ಥಿತಿ ಬಂದಿದೆ” ಎಂದು ಹೇಳಿದರು.

ಭದ್ರಾವತಿಯ ಪಾಕಿಸ್ತಾನ ಪರ ಘೋಷಣೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಸರ್ಕಾರ ಇರುವವರೆಗೂ ಭಾರತ ಅಪಾಯದಲ್ಲಿದೆ. ಇಂತಹ ಘಟನೆಗಳಲ್ಲಿ ಭಾಗಿಯಾಗುವವರು ದೇಶದ್ರೋಹಿಗಳು,” ಎಂದು ಕಿಡಿಕಾರಿದರು. “ಅವರನ್ನು ಕಾಂಗ್ರೆಸ್ ನಾಯಕರು ‘ಬ್ರದರ್ಸ್’ ಎಂದು ಕರೆಯುತ್ತಾರೆ,” ಎಂಬ ಗಂಭೀರ ಆರೋಪವನ್ನೂ ಮಾಡಿದರು.

ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಅವರು, “ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ನೂರಕ್ಕೆ ನೂರು ಗೆಲುವು ಸಾಧಿಸಲಿದ್ದಾರೆ. ಅವರ ಅನುಭವ, ಸರಳತೆ ಈ ದೇಶಕ್ಕೆ ಉಚಿತ ಸೇವೆಯ ಸಂಕೇತ,” ಎಂದು ಹೇಳಿದರು.

Trending

Exit mobile version