ದೇಶ
ಪ್ರಗತಿಶೀಲ ಕರ್ನಾಟಕದಲ್ಲೇ 1,749 ಗ್ರಾಮಗಳಿಗೆ ಬಸ್ ಇಲ್ಲ! ಸಾರಿಗೆ ಕೊರತೆ ಬಹಿರಂಗ
ಬೆಂಗಳೂರು: ಪ್ರಗತಿಶೀಲ ರಾಜ್ಯ ಎಂದು ಹೆಸರಾದ ಕರ್ನಾಟಕದಲ್ಲೇ ಇಂದಿಗೂ 1,749 ಗ್ರಾಮಗಳಿಗೆ ರಸ್ತೆ ಸಾರಿಗೆ ಬಸ್ ಸೌಲಭ್ಯವೇ ಇಲ್ಲ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಸರ್ಕಾರದ ಅಧಿಕೃತ ಮಾಹಿತಿಯೇ ಈ ಕಹಿ ಸತ್ಯವನ್ನು ಬಹಿರಂಗಪಡಿಸಿದೆ.
ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆ ದೇಶದಲ್ಲೇ ಉತ್ತಮವಾಗಿದೆ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಕೆಆರ್ಟಿಸಿ ಹಾಗೂ ಬಿಎಂಟಿಸಿ ಮೂಲಕ ರಾಜ್ಯದ ಬಹುತೇಕ ಪ್ರದೇಶಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಆದರೂ ರಾಜ್ಯದ ಹಲವು ಹಳ್ಳಿಗಳು ಇನ್ನೂ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿರುವುದು ರಾಜ್ಯದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ.
ಸಾರಿಗೆ ಇಲಾಖೆಯ ಮಾಹಿತಿಯಂತೆ, ಕೆಎಸ್ಆರ್ಟಿಸಿ ವ್ಯಾಪ್ತಿಯ 21,748 ಗ್ರಾಮಗಳಲ್ಲಿ 20,090 ಗ್ರಾಮಗಳಿಗೆ ಮಾತ್ರ ಬಸ್ ಸೌಲಭ್ಯ ದೊರೆತಿದ್ದು, 1,658 ಗ್ರಾಮಗಳಿಗೆ ಬಸ್ ಸಂಚಾರವೇ ಇಲ್ಲ. ಇದರಲ್ಲಿ 234 ಗ್ರಾಮಗಳಿಗೆ ಭಾರಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ ಇಲ್ಲ. 2 ಕಿ.ಮೀ. ಒಳಗಿನ ರಸ್ತೆ ಸಂಪರ್ಕ ಇರುವವರೆಗೂ ತಾತ್ಕಾಲಿಕ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 6 ಜಿಲ್ಲೆಗಳ 4,610 ಹಳ್ಳಿಗಳಲ್ಲಿ 45 ಗ್ರಾಮಗಳಿಗೆ ರಸ್ತೆ ಕೊರತೆಯಿಂದ ಬಸ್ ಇಲ್ಲ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯಲ್ಲಿ 46 ಗ್ರಾಮಗಳು ಇದೇ ಸಮಸ್ಯೆ ಎದುರಿಸುತ್ತಿವೆ.
ಇತ್ತ ಬಿಎಂಟಿಸಿ ಬೆಂಗಳೂರು ನಗರ ಹಾಗೂ 25 ಕಿ.ಮೀ. ವ್ಯಾಪ್ತಿಯಲ್ಲಿನ ಎಲ್ಲಾ ಯೋಗ್ಯ ರಸ್ತೆಗಳ ಪ್ರದೇಶಗಳಿಗೆ ಬಸ್ ಸೇವೆ ಒದಗಿಸುತ್ತಿದ್ದು, ಪ್ರತಿದಿನ ಸರಾಸರಿ 44 ಲಕ್ಷ ಪ್ರಯಾಣಿಕರು ಬಸ್ ಬಳಸುತ್ತಿದ್ದಾರೆ.
ಸಾರಿಗೆ ಸೌಲಭ್ಯವಿಲ್ಲದ ಗ್ರಾಮಗಳಿಗೆ ಹಂತ ಹಂತವಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಮಾರ್ಗ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವರು ಲಿಖಿತವಾಗಿ ಭರವಸೆ ನೀಡಿದ್ದಾರೆ.