ದೇಶ
BIG NEWS : ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ಆತಂಕ!
ಬೆಂಗಳೂರು:
ಬೆಲೆ ಏರಿಕೆಗಳಿಂದ ಈಗಾಗಲೇ ಕಂಗಾಲಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಮೆಟ್ರೋ ದರ ಏರಿಕೆ ಚರ್ಚೆ ಮುಗಿಯುವ ಮೊದಲೇ, ಇದೀಗ ವಿದ್ಯುತ್ ದರ ಹೆಚ್ಚಳದ ಪ್ರಸ್ತಾವನೆ ಭಾರೀ ಚಿಂತೆ ಹುಟ್ಟಿಸಿದೆ. ರಾಜ್ಯದ ಎಲ್ಲಾ ಎಸ್ಕಾಂಗಳು ಸೇರಿ ವಿದ್ಯುತ್ ದರ ಹೆಚ್ಚಿಸಲು ಕರ್ನಾಟಕ ವಿದ್ಯುಶ್ಚಕ್ತಿ ನಿಯಂತ್ರಣ ಆಯೋಗಕ್ಕೆ (KERC) ವಾರ್ಷಿಕ ವರದಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಬೆಲೆ ಏರಿಕೆ ಯಾಕೆ?
ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂಗಳು 2024–25ರಲ್ಲಿ ಸಂಭವಿಸಿದ ಕಾರ್ಯಾಚರಣೆ ನಷ್ಟ ಮತ್ತು ಆದಾಯ ಕೊರತೆಗಳನ್ನು ಸರಿದೂಗಿಸಲು ದರ ಹೆಚ್ಚಳ ಅಗತ್ಯ ಎಂದು ಕೆಇಆರ್‌ಸಿಗೆ ಮನವಿ ಮಾಡಿವೆ. ಈ ಹಿನ್ನೆಲೆಯಲ್ಲಿ, ಮುಂದಿನ ವಾರಗಳಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಿ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಕೆಇಆರ್‌ಸಿ ಮುಂದಾಗಿದೆ.
ಎಷ್ಟು ಬೆಲೆ ಏರಿಕೆ?
ರಾಜ್ಯದ ಎಲ್ಲಾ ಎಸ್ಕಾಂಗಳು ಸೇರಿ ಸುಮಾರು ₹4,500 ಕೋಟಿ ನಷ್ಟ ಅನುಭವಿಸುತ್ತಿವೆ. ಇದರಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲೇ ₹2,800 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ. ಹೀಗಾಗಿ ಪ್ರತಿ ಯೂನಿಟ್ ವಿದ್ಯುತ್‌ಗೆ ₹1 ಹೆಚ್ಚಳ ಮಾಡುವ ಪ್ರಸ್ತಾವನೆ ಮುಂದಿಟ್ಟಲಾಗಿದೆ.
ಈಗಾಗಲೇ ಮುಂದಿನ ಮೂರು ವರ್ಷಗಳ ದರವನ್ನು ನಿಗದಿ ಮಾಡಲಾಗಿದೆ, ಆದರೂ ನಷ್ಟದ ನೆಪದಲ್ಲಿ ಮತ್ತೆ ದರ ಏರಿಕೆ ಮಾಡುವುದು ಸರಿಯಲ್ಲ ಎಂದು ವಾಣಿಜ್ಯ–ಕೈಗಾರಿಕಾ ವಲಯ ಹಾಗೂ ಜನಸಾಮಾನ್ಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕ ವಿಚಾರಣೆ ಯಾವಾಗ?
ಫೆಬ್ರವರಿ 16ರಿಂದ 27ರವರೆಗೆ ಸಾರ್ವಜನಿಕ ವಿಚಾರಣಾ ಸಭೆಗಳು ನಡೆಯಲಿದ್ದು, ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಸಾರ್ವಜನಿಕ ಒತ್ತಡದಿಂದ ದರ ಏರಿಕೆಯನ್ನು ಮುಂದೂಡುವ ಸಾಧ್ಯತೆಯೂ ತಳ್ಳಿ ಹಾಕಲಾಗದು.
ಕೈಗಾರಿಕಾ ವಲಯದ ವಿರೋಧ
ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ,
“ಬೆಸ್ಕಾಂಗಳು ನೀಡಿರುವ ಕಾರಣಗಳನ್ನು ಪರಿಶೀಲಿಸಿ, ಯಾವುದೇ ಅನ್ಯಾಯಕರ ದರ ಏರಿಕೆ ಇದ್ದರೆ ನಾವು ತೀವ್ರವಾಗಿ ವಿರೋಧಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಕಳೆದ ವರ್ಷದ ಮಾರ್ಚ್‌ನಲ್ಲಿ 36 ಪೈಸೆ ದರ ಏರಿಕೆ ಮಾಡಿದ್ದ ಎಸ್ಕಾಂಗಳು, ಈಗ ಮತ್ತೆ ಏಪ್ರಿಲ್‌ನಿಂದ ಹೆಚ್ಚಳಕ್ಕೆ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.