ಬೆಂಗಳೂರು

Karnataka ದಲ್ಲಿ ಔಷಧ ಬೆಲೆ ದಂಧೆ ಬಯಲು: 1000 ಪಟ್ಟು ಹೆಚ್ಚುವರಿ ದರಕ್ಕೆ ಮಾರಾ

Published

on

ಬೆಂಗಳೂರು: Karnataka ದಲ್ಲಿ ಬಡವರು ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರಿಯಾಗಿಸಿಕೊಂಡು ಔಷಧ, ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್‌ಗಳನ್ನು ಭಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ಪತ್ತೆಹಚ್ಚಿದೆ. ಆಸ್ಪತ್ರೆಗಳು ಹಾಗೂ ಪೂರೈಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಕೆಲವು ಔಷಧಗಳನ್ನು ರೋಗಿಗಳಿಗೆ ಶೇ.60ರಿಂದ 90 ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎಫ್‌ಡಿಎ ಅಧಿಕಾರಿಗಳ ಪರಿಶೀಲನೆ ವೇಳೆ ಔಷಧಗಳ ಲ್ಯಾಂಡಿಂಗ್ ವೆಚ್ಚ ಮತ್ತು ಆಸ್ಪತ್ರೆಗಳು ಹಾಗೂ ಔಷಧ ಮಳಿಗೆಗಳು ನಿಗದಿಪಡಿಸಿರುವ ಗರಿಷ್ಠ ಚಿಲ್ಲರೆ ಬೆಲೆ (MRP) ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ.

ಉದಾಹರಣೆಗೆ, ₹86ಕ್ಕೆ ಖರೀದಿಸಿದ ಸಾಮಾನ್ಯ ಔಷಧವೊಂದರ MRPಯನ್ನು ₹4,528ಕ್ಕೆ ನಿಗದಿಪಡಿಸಲಾಗಿದೆ. ಮತ್ತೊಂದು ₹160 ಮೌಲ್ಯದ ಔಷಧಕ್ಕೆ ₹7,110 MRP ನಿಗದಿಪಡಿಸಿರುವುದು ಪತ್ತೆಯಾಗಿದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಸೈಟ್ಯಾಕ್ಸ್ 100 ಎಂಜಿ ಔಷಧದ ಲ್ಯಾಂಡಿಂಗ್ ವೆಚ್ಚ ₹342 ಇದ್ದರೆ, ಅದರ MRP ₹3,836 ಎಂದು ನಿಗದಿಪಡಿಸಲಾಗಿದೆ. ನ್ಯೂಕೈನ್ 300 ಎಂಜಿ ಔಷಧದ ಲ್ಯಾಂಡಿಂಗ್ ವೆಚ್ಚ ₹112 ಇದ್ದರೂ ₹1,239 MRP ನಿಗದಿಪಡಿಸಲಾಗಿದೆ. ಬಿವಾಟಾಸ್ 400 ಎಂಜಿ ಇಂಜೆಕ್ಷನ್‌ಗೆ ₹5,850 ಲ್ಯಾಂಡಿಂಗ್ ವೆಚ್ಚವಿದ್ದರೆ, MRP ₹62,690 ಎಂದು ನಿಗದಿಪಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

254 ಔಷಧ ಕಂಪನಿಗಳ ಪಟ್ಟಿ ಸಿದ್ಧ

ರಾಜ್ಯದಲ್ಲಿ ಹೆಚ್ಚಿನ ಟ್ರೇಡ್ ಮಾರ್ಜಿನ್ ಪಡೆಯುತ್ತಿರುವ 254 ಔಷಧ ತಯಾರಿಕಾ ಕಂಪನಿಗಳ ಸಮಗ್ರ ಪಟ್ಟಿಯನ್ನು FDA ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಹಾಗೂ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಗೆ FDA ಪತ್ರ ಬರೆದಿದೆ.

Drugs Prices Control Order-2013 ಅಡಿಯಲ್ಲಿ ಈ ಕಂಪನಿಗಳ ಉತ್ಪನ್ನಗಳ ದರಗಳನ್ನು ಪರಿಶೀಲಿಸಿ, ಅತಿಯಾದ ಟ್ರೇಡ್ ಮಾರ್ಜಿನ್‌ಗೆ ನಿಯಂತ್ರಣ ಹೇರಬೇಕು ಎಂದು FDA ಒತ್ತಾಯಿಸಿದೆ.

ಇದೇ ವೇಳೆ ಔಷಧಗಳ ಜೊತೆಗೆ ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್‌ಗಳ ಪ್ರಮುಖ ವಿಭಾಗಗಳಿಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಲೆ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು FDA ಮನವಿ ಮಾಡಿದೆ.

ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳು ಬೆಲೆ ಕುರಿತು ಚೌಕಾಶಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವಿದೆ ಎಂದು FDA ತನ್ನ ಪತ್ರದಲ್ಲಿ ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.

Trending

Exit mobile version