ದ್ವೇಷ ಭಾಷಣಕ್ಕೆ ಕಡಿವಾಣ: ಕರ್ನಾಟಕದಲ್ಲಿ ದೇಶದ ಮೊದಲ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಅಂಗೀಕಾರ | Hosa Suddi

ದೇಶ

ದ್ವೇಷ ಭಾಷಣಕ್ಕೆ ಕಡಿವಾಣ: ಕರ್ನಾಟಕದಲ್ಲಿ ದೇಶದ ಮೊದಲ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಅಂಗೀಕಾರ

Published

on

ಬೆಳಗಾವಿ: ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025 ಅನ್ನು ವಿಧಾನಸಭೆಯಲ್ಲಿ ಗುರುವಾರ ಅಂಗೀಕರಿಸಲಾಗಿದೆ. ಇದು ದೇಶದಲ್ಲೇ ದ್ವೇಷ ಭಾಷಣ ತಡೆಗೆ ತರಲಾದ ಮೊದಲ ಕಾನೂನು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ಬುಧವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಈ ಮಸೂದೆಯನ್ನು ಮಂಡಿಸಿದ್ದರು. ವಿರೋಧ ಪಕ್ಷಗಳ ತೀವ್ರ ಆಕ್ಷೇಪ ಮತ್ತು ಗದ್ದಲದ ನಡುವೆಯೇ ಚರ್ಚೆಯ ಬಳಿಕ ಮಸೂದೆ ಅಂಗೀಕಾರಗೊಂಡಿದೆ. ಈ ಮಸೂದೆಗೆ ಡಿಸೆಂಬರ್ 4ರಂದು ರಾಜ್ಯ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿತ್ತು.

ಮಸೂದೆ ಅಂಗೀಕಾರದ ವೇಳೆ ಸಚಿವ ಬೈರತಿ ಸುರೇಶ್ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ನಡುವೆ ಏಕವಚನದಲ್ಲಿ ವಾಗ್ವಾದ ನಡೆಯಿತು. ಕರಾವಳಿ ಕರ್ನಾಟಕದ ಕುರಿತು ಬೈರತಿ ಸುರೇಶ್ ನೀಡಿದ ಹೇಳಿಕೆಗೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಬಿಲ್ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ತೋರಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್ ಸದನವನ್ನು ಮುಂದೂಡಿದರು.

ಏನಿದು ದ್ವೇಷ ಭಾಷಣ ಮಸೂದೆ?

ಧರ್ಮ, ಜಾತಿ, ಸಮುದಾಯ, ಲಿಂಗ, ಭಾಷೆ, ವಾಸಸ್ಥಳ, ಲೈಂಗಿಕ ದೃಷ್ಟಿಕೋನ ಅಥವಾ ಬುಡಕಟ್ಟು ಆಧಾರದಲ್ಲಿ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ದ್ವೇಷ ಉಂಟುಮಾಡುವ ಯಾವುದೇ ಭಾಷಣ, ಪ್ರಕಟಣೆ ಅಥವಾ ಪ್ರಸಾರವನ್ನು ದ್ವೇಷ ಭಾಷಣ ಎಂದು ವರ್ಗೀಕರಿಸಲಾಗಿದೆ.

ಮೊದಲ ಬಾರಿ ಅಪರಾಧಕ್ಕೆ 1 ರಿಂದ 7 ವರ್ಷ ಜೈಲು ಮತ್ತು ₹50,000 ದಂಡ, ಪುನರಾವರ್ತನೆ ಆದರೆ 2 ರಿಂದ 10 ವರ್ಷ ಜೈಲು ಹಾಗೂ ₹1 ಲಕ್ಷ ದಂಡ ವಿಧಿಸಲು ಅವಕಾಶವಿದೆ. ದ್ವೇಷ ಭಾಷಣ ಪ್ರಕರಣಗಳು ಜಾಮೀನು ರಹಿತವಾಗಿದ್ದು, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮೂಲಕ ವಿಚಾರಣೆ ನಡೆಯಲಿದೆ.

Trending

Exit mobile version