ದೇಶ
ಭಯ ಬೇಡ: 24/7 ಗಸ್ತು, ‘ಅರಣ್ಯ ಮಿತ್ರ’ ಯೋಜನೆ ಆರಂಭಕ್ಕೆ ಸಿಎಂ ಗ್ರೀನ್ ಸಿಗ್ನಲ್!
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ವಿಜ್ಞಾನಾಧಾರಿತ, ಸಮಗ್ರ ಮತ್ತು ದೀರ್ಘಕಾಲ ಕಾರ್ಯತಂತ್ರ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಕ್ರಮಗಳನ್ನು ಘೋಷಿಸಿದ್ದಾರೆ. ಡ್ರೋನ್ ಕ್ಯಾಮೆರಾಗಳ ನಿಗಾ ವೃದ್ಧಿ, ಅಗತ್ಯ ಸಿಬ್ಬಂದಿ ನೇಮಕ, ತಜ್ಞರ ಜೊತೆ ವಿಶೇಷ ಸಮಾಲೋಚನೆ ಸೇರಿದಂತೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ವಿಧಾನಸೌಧದಲ್ಲಿ ಗುರುವಾರ ನಡೆದ ಮಹತ್ವದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ, ಶೃಂಗೇರಿ ಶಾಸಕ ರಾಜುಗೌಡ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಹಾಗೂ ಅರಣ್ಯ–ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಕೃಪಾಕರ ಸೇನಾನಿ ಮತ್ತು ಸಂಜಯ್ ಗುಬ್ಬಿ ಸೇರಿದಂತೆ ವನ್ಯಜೀವಿ ತಜ್ಞರ ಸಲಹೆಗಳನ್ನೂ ಸಭೆಯಲ್ಲಿ ಪರಿಗಣಿಸಲಾಯಿತು.
15–20 ಹುಲಿಗಳನ್ನು ತ್ವರಿತವಾಗಿ ಬಂಧಿಸುವ ಸೂಚನೆ
ವಯಸ್ಸಾದ ಕಾರಣ ಅಥವಾ ಗಾಯಗಳಿಂದಾಗಿ ಅರಣ್ಯ ವ್ಯಾಪ್ತಿಯಿಂದ ಹೊರಗೆ ಸಂಚರಿಸುತ್ತಿರುವ ಸುಮಾರು 15–20 ಹುಲಿಗಳನ್ನು ಡ್ರೋನ್ ಕ್ಯಾಮೆರಾ ಬಳಸಿ ಪತ್ತೆಹಚ್ಚಿ ತಕ್ಷಣ ಹಿಡಿಯಲು ಸಿಎಂ ಸೂಚನೆ ನೀಡಿದರು. ಈಗಾಗಲೇ ಕಾರ್ಯಾಚರಣೆಯಲ್ಲಿ ಎಂಟು ಕುಮ್ಕಿ ಆನೆಗಳನ್ನು ಬಳಸಲಾಗುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಹಾಗೂ ಸ್ಕ್ವಾಡ್ಗಳ ಸಂಖ್ಯೆಯನ್ನು ಹೆಚ್ಚಿಸುವುದು ಅನಿವಾರ್ಯ ಎಂದು ಅವರು ಹೇಳಿದ್ದಾರೆ.
8 ಅಂಶಗಳ ಹೊಸ ಕಾರ್ಯತಂತ್ರಕ್ಕೆ ಸಿಎಂ ಒಪ್ಪಿಗೆ
ಸಭೆಯಲ್ಲಿ ಕೆಳಗಿನ ಎಂಟು ಪ್ರಮುಖ ಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ:
- ಸಂಘರ್ಷ ಪ್ರದೇಶಗಳ ಗುರುತು: ಯಾವ ಪ್ರದೇಶಗಳಲ್ಲಿ ಯಾವ ಸ್ವರೂಪದ ಸಂಘರ್ಷ ಹೆಚ್ಚು ಎಂದು ನಿಖರ ಪಟ್ಟಿ.
- ಮಾನವ ಸಂಪನ್ಮೂಲ ನಿರ್ವಹಣೆ: ಸಂಘರ್ಷದ ತೀವ್ರತೆಗೆ ಅನುಗುಣವಾಗಿ ಅಧಿಕಾರಿಗಳ ನಿಯೋಜನೆ.
- ಅರಣ್ಯಾಚೆಗಿನ ಗ್ರಾಮಗಳಲ್ಲಿ ಗಸ್ತು ಹೆಚ್ಚಳ ಮತ್ತು ರಿಜಿಸ್ಟರ್ ನಿರ್ವಹಣೆ.
- ಹಿರಿಯ ಅಧಿಕಾರಿಗಳ ಗ್ರಾಮ ವಾಸ್ತವ್ಯ: ಸಂಘರ್ಷ ಪೀಡಿತ ಗ್ರಾಮಗಳಿಗೆ ನಿಯಮಿತ ಭೇಟಿ.
- ಸ್ಥಳೀಯರನ್ನು ‘ಅರಣ್ಯ ಮಿತ್ರ’ರಾಗಿ ತೊಡಗಿಸಿಕೊಳ್ಳುವುದು.
- 24/7 ವಾಹನ ಮತ್ತು ಸಿಬ್ಬಂದಿ ಲಭ್ಯತೆ: ವನ್ಯಜೀವಿಗಳು ಸಂಚರಿಸುವ ಮಾರ್ಗಗಳಲ್ಲಿ ಸತತ ಕಾವಲು.
- ಜನಜಾಗೃತಿ: ವನ್ಯಜೀವಿ ದಾಳಿ ಹಾಗೂ ಸೆರೆ ಕಾರ್ಯಾಚರಣೆ ಕುರಿತು ಅಣಕು ಪ್ರದರ್ಶನಗಳ ಆಯೋಜನೆ.
- ಸಮನ್ವಯ ಸಮಿತಿಗಳು: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೊಸ ಸಮಿತಿಗಳ ರಚನೆ.
ರಾಜ್ಯದಲ್ಲಿ ವನ್ಯಜೀವಿ ಸಂಖ್ಯೆ ಮತ್ತು ಮಾನವ ಜೀವ ಹಾನಿ
ಕರ್ನಾಟಕದಲ್ಲಿ ಪ್ರಸ್ತುತ 6,395 ಆನೆಗಳು (ದೇಶದಲ್ಲಿ ಮೊದಲ ಸ್ಥಾನ), 563 ಹುಲಿಗಳು (ಎರಡನೇ ಸ್ಥಾನ) ಮತ್ತು 1,879 ಚಿರತೆಗಳು (ಮೂರನೇ ಸ್ಥಾನ) ಇದ್ದು, ಇದು ರಾಜ್ಯದಲ್ಲಿ ಸಂಘರ್ಷದ ಪ್ರಮಾಣ ಹೆಚ್ಚಿರುವುದಕ್ಕೆ ಒಂದು ಪ್ರಮುಖ ಕಾರಣವಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಮಾನವ ಜೀವ ಹಾನಿ:
- 2022–23: 57
- 2023–24: 65
- 2024–25: 46
- 2025–26: 32
ಚಾಮರಾಜನಗರ, ಕೊಡಗು, ಮೈಸೂರು, ಹಾಸನ ಮತ್ತು ರಾಮನಗರ ಜಿಲ್ಲೆಗಳಲ್ಲಿ ಮಾನವ ಪ್ರಾಣ ಹಾನಿ ಪ್ರಕರಣಗಳು ಅತಿಹೆಚ್ಚು ದಾಖಲಾಗಿದೆ. 2024–25ರಲ್ಲಿ ಜೀವಹಾನಿ ಪ್ರಕರಣಗಳು 30% ಕಡಿಮೆಯಾಗಿರುವುದು ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮ ಎಂದು ಸಭೆಯಲ್ಲಿ ವಿವರಿಸಲಾಯಿತು.
ಪರಿಸರ ಸುಧಾರಣೆಗೂ ಸರ್ಕಾರದ ಆದೇಶ
ಬೇಸಿಗೆಯಲ್ಲಿ ವನ್ಯಜೀವಿಗಳು ಆಹಾರ ಮತ್ತು ನೀರಿಗಾಗಿ ಹೊರಗೆ ಬರುವುದನ್ನು ತಡೆಯಲು ಅರಣ್ಯ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಮೂಲ ಸೃಷ್ಟಿಸಬೇಕು. ಲಾಂಟಾನ ಕಳೆ ವ್ಯಾಪಕವಾಗಿ ಹರಡುತ್ತಿರುವುದರಿಂದ, ಅದನ್ನು ತೆರವುಗೊಳಿಸುವುದೂ ತುರ್ತು ಅಗತ್ಯ ಎಂದು ಸಿಎಂ ಸೂಚಿಸಿದರು.