ದೇಶ
IT ರಫ್ತಿನಲ್ಲಿ ಕರ್ನಾಟಕದ ಪ್ರಾಬಲ್ಯ: 2030ರೊಳಗೆ 11.5 ಲಕ್ಷ ಕೋಟಿ ಗುರಿ – ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಘೋಷಣೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್ನಲ್ಲಿ ಮಾಡಿದ್ದಾರೆ. “ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ” ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಉಲ್ಲೇಖಿಸಿದ ಸಿಎಂ, ವಿಜ್ಞಾನ ಹಾಗೂ ನವೋದ್ಯಮದ ದಿಕ್ಕಿನಲ್ಲಿ ಕರ್ನಾಟಕವನ್ನು ಇನ್ನಷ್ಟು ಮುನ್ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.
ಕರ್ನಾಟಕವು ದೇಶದ ಐಟಿ ವಲಯದಲ್ಲಿ ಮುಂಚೂಣಿಯಲ್ಲಿದ್ದು, ಭಾರತದ ಒಟ್ಟು ಐಟಿ ರಫ್ತಿನಲ್ಲಿ ಶೇ.43ರಷ್ಟು ಕೊಡುಗೆಯನ್ನು ನೀಡುತ್ತಿದೆ. ಹೊಸ ಐಟಿ ನೀತಿ 2025–30 ಅಡಿಯಲ್ಲಿ 2030ರ ವೇಳೆಗೆ ಸಾಫ್ಟ್ವೇರ್ ರಫ್ತು 11.5 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯಿದೆ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯವು 18 ಸಾವಿರಕ್ಕೂ ಹೆಚ್ಚು ಸಕ್ರಿಯ ಸ್ಟಾರ್ಟ್ಅಪ್ಗಳ ಕೇಂದ್ರವಾಗಿದ್ದು, ಜಾಗತಿಕ ಸ್ಟಾರ್ಟ್ಅಪ್ ಪರಿಸರದಲ್ಲಿ ಕಳೆದ ವರ್ಷದ 21ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಏರಿಕೆಯಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಬಿಗ್ ಡೇಟಾ ಕ್ಷೇತ್ರದಲ್ಲಿ ವಿಶ್ವದ ಟಾಪ್-50 ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನದಲ್ಲಿದೆ ಎಂಬುದು ಗಮನಾರ್ಹ.
ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು 1,000 ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ (LEAP) ಆರಂಭಿಸಲಾಗಿದೆ. ಇದರಡಿ ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ‘ಲೀಪ್ ಲ್ಯಾಬ್ಸ್’ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.
ಇದೇ ವೇಳೆ Foxconn, LAM Research ಮತ್ತು Applied Materials ಸೇರಿದಂತೆ ಜಾಗತಿಕ ಕಂಪನಿಗಳಿಂದ ಸುಮಾರು 45 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಜೊತೆಗೆ IISc, ISRO ಮತ್ತು ಕಿಯೋನಿಕ್ಸ್ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ BRAINz – ರೋಬೋಟಿಕ್ಸ್ ಮತ್ತು AI ಇನ್ನೊವೇಶನ್ ಕ್ಯಾಂಪಸ್ ಸ್ಥಾಪನೆಗೂ ಯೋಜನೆ ಇದೆ.
ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯಾಗಿ ಅಭಿವೃದ್ಧಿಪಡಿಸುವುದು, ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ, ರಾಯಚೂರಿನ IIITನಲ್ಲಿ AI ಶ್ರೇಷ್ಠತಾ ಕೇಂದ್ರ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಸರ್ಕಾರ ಘೋಷಿಸಿದೆ.