ದೇಶ
SSLC–PUCಗೆ ದೊಡ್ಡ ಬದಲಾವಣೆ: ಮೂರನೇ ಪರೀಕ್ಷೆ ರದ್ದು, ಈಗ ಎರಡು ಪರೀಕ್ಷೆಗಳು ಮಾತ್ರ!
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ದ್ವಿತೀಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ SSLC ಮತ್ತು 2ನೇ PUC ಪರೀಕ್ಷೆಗಳು ಎರಡು ಹಂತಗಳಲ್ಲೇ ನಡೆಯಲಿವೆ. ಇದುವರೆಗೆ ಜಾರಿಗೆ ಇದ್ದ ಮೂರು ಹಂತದ ಪರೀಕ್ಷಾ ಮಾದರಿಯನ್ನು ಕೈಬಿಡಲು ಇಲಾಖೆ ಬಹುತೇಕ ತೀರ್ಮಾನಿಸಿದೆ.
ಉತ್ತೀರ್ಣತೆಗೆ ಅಗತ್ಯವಿರುವ ಅಂಕಗಳನ್ನು 53% ರಿಂದ 33% ಕ್ಕೆ ಕಡಿತಗೊಳಿಸಿದ ನಂತರ, ಮೊದಲ ಎರಡು ಪರೀಕ್ಷೆಗಳಲ್ಲೇ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಮೂರನೇ ಪರೀಕ್ಷೆಯಲ್ಲಿ ಅಂಕಗಳ ಸುಧಾರಣೆ ದೊಡ್ಡ ಮಟ್ಟದಲ್ಲಿ ಕಂಡುಬರದ ಕಾರಣ, ಮೂರನೇ ಪರೀಕ್ಷೆಯ ಅಗತ್ಯತೆ ಇಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
ಶಿಕ್ಷಣ ಇಲಾಖೆ ಈಗಾಗಲೇ SSLC ಮತ್ತು 2ನೇ PUC ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
- SSLC ಪರೀಕ್ಷೆಗಳು ಮಾರ್ಚ್ 18 ರಿಂದ ಏಪ್ರಿಲ್ 2, 2026 ರವರೆಗೆ ನಡೆಯಲಿವೆ.
- 2ನೇ PUC ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17, 2026 ರವರೆಗೆ ನಡೆಯಲಿವೆ.
ವಿದ್ಯಾರ್ಥಿಗಳ ಮೇಲೆ ಅನಗತ್ಯ ಹೊರೆ ಕಡಿಮೆ ಮಾಡುವದು, ಪರೀಕ್ಷಾ ನಿರ್ವಹಣೆಯಲ್ಲಿ ಪರಿಣಾಮಕಾರಿ ವ್ಯವಸ್ಥೆ, ಮತ್ತು ಮೊದಲ ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣ ಪ್ರಮಾಣ ಹೆಚ್ಚಿರುವುದು ಈ ನಿರ್ಣಯದ ಪ್ರಮುಖ ಕಾರಣಗಳಾಗಿವೆ. ಈ ಬದಲಾವಣೆಯಿಂದ ರಾಜ್ಯದ ಪರೀಕ್ಷಾ ವ್ಯವಸ್ಥೆಯಲ್ಲಿ ಸರಳೀಕರಣ ಸಾಧ್ಯವಾಗಲಿದೆ ಎಂದು ಇಲಾಖೆಯು ವಿಶ್ವಾಸ ವ್ಯಕ್ತಪಡಿಸಿದೆ.
ಹೊಸ ನಿಯಮ ಜಾರಿಗೆ ಬಂದರೆ ವಿದ್ಯಾರ್ಥಿಗಳು ಮೊದಲ ಎರಡು ಪ್ರಯತ್ನಗಳಲ್ಲೇ ಪೂರ್ಣ ಸಿದ್ಧತೆಯೊಂದಿಗೆ ಹಾಜರಾಗಬೇಕಾಗುತ್ತದೆ. ಶಿಕ್ಷಕರು ಹಾಗೂ ಪೋಷಕರಿಂದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುವ ಸಾಧ್ಯತೆ ಇದೆ.