ಅಪರಾಧ
ಜೈಲಿನಲ್ಲೇ ದಾಂಧಲೆ ನಡೆಸಿದ ಮಂಗಳೂರು ಆರೋಪಿಗಳು: ಹಿನ್ನೆಲೆಯೇನು?
ಕಾರವಾರ: ಕಾರವಾರ ಜೈಲಿನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನಿಂದ ವರ್ಗಾವಣೆಗೊಂಡಿದ್ದ ಆರು ಆರೋಪಿಗಳು ಜೈಲಿನಲ್ಲಿ ದಾಂಧಲೆ ನಡೆಸಿದ್ದು, ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮಂಗಳೂರಿನ ಮೊಹಮ್ಮದ್ ಅಬ್ದುಲ್ ಫಯಾನ್, ಕೌಶಿಕ್ ನಿಹಾಲ್ ಸೇರಿದಂತೆ ಗ್ಯಾಂಗ್ ಸದಸ್ಯರು ಜೈಲಿನ ಒಳಗೆ ಗಲಾಟೆ ಸೃಷ್ಟಿಸಿ ವಸ್ತುಗಳನ್ನು ಪುಡಿಗಟ್ಟಿದ್ದಾರೆ. ತಕ್ಷಣವೇ ಕಾರವಾರ ನಗರ ಠಾಣೆ ಪೊಲೀಸರು ಜೈಲಿಗೆ ದೌಡಾಯಿಸಿ ಪರಿಸ್ಥಿತಿ ಪರಿಶೀಲಿಸಿದರು.
ಇದಕ್ಕೂ ಮೊದಲು ಜೈಲಿನೊಳಗಿನ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಅಧಿಕಾರಿಗಳು ಬಿಗಿ ಬಂದೋಬಸ್ತ್ ಮಾಡಿದ್ದರು. ಇದೇ ಹಿನ್ನೆಲೆಯಲ್ಲಿ ಜೈಲರ್ ಕಲ್ಲಪ್ಪ ಗಸ್ತಿಯವರ ಮೇಲೆ ಹಾಗೂ ಇಬ್ಬರು ಸಿಬ್ಬಂದಿಗಳ ಮೇಲೆ ಮಂಗಳೂರಿನ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು ಜೈಲು ನಿರ್ವಹಣೆಯಲ್ಲಿ ಭಾರೀ ತಲ್ಲಣ ಉಂಟಾಗಿತ್ತು.
ಡಕಾಯಿತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಈ ರೌಡಿಗಳನ್ನು ಮಂಗಳೂರು ಜೈಲಿನಿಂದ ಕಾರವಾರಕ್ಕೆ ವರ್ಗಾವಣೆ ಮಾಡಲಾಗಿತ್ತು. ಮೊನ್ನೆಯ ಹಲ್ಲೆ ಪ್ರಕರಣದ ಬೆನ್ನಲ್ಲೇ, ಇಂದು ಉಳಿದ ಸಹಚರರಿಂದ ಮತ್ತೊಮ್ಮೆ ದಾಂಧಲೆ ನಡೆದು, ಪರಿಸ್ಥಿತಿ ಗಂಭೀರಗೊಂಡಿದೆ.
ಪ್ರಸ್ತುತ ಕಾರವಾರ ಡಿವೈಎಸ್‌ಪಿ ಗಿರೀಶ್ ಜೈಲಿನಲ್ಲೇ ಮೊಕ್ಕಾಂ ಹೂಡಿ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಕ್ರಮ ಕೈಗೊಂಡಿದ್ದಾರೆ.