ದೇಶ
Kedarnath ಮಾರ್ಗದಲ್ಲಿ ಭೂಕುಸಿತ: 5 ವರ್ಷದ ಬಾಲಕ ಸಾವು, 1,500 ಯಾತ್ರಿಕರ ಸುರಕ್ಷಿತ ಸ್ಥಳಾಂತರ
ಡೆಹ್ರಾಡೂನ್: Kedarnath ಯಾತ್ರಾ ಮಾರ್ಗದಲ್ಲಿ ಭಾನುವಾರ (ಸೆ.27) ತಡರಾತ್ರಿ ಸಂಭವಿಸಿದ ಏಕಾಏಕಿ ಭೂಕುಸಿತದಲ್ಲಿ 5 ವರ್ಷದ ಬಾಲಕ ಸಾವನ್ನಪ್ಪಿದ್ದು, ಸುಮಾರು 1,500 ಯಾತ್ರಿಕರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಗೌರಿಕುಂಡದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಚಿರ್ಬಾಸಾ ಪ್ರದೇಶದ ಯಾತ್ರಾ ಮಾರ್ಗದಲ್ಲಿ ಬೆಟ್ಟದಿಂದ ಬೃಹತ್ ಬಂಡೆಗಳು ಹಾಗೂ ಶಿಲಾಖಂಡಗಳು ಏಕಾಏಕಿ ಕುಸಿದಿವೆ. ಈ ವೇಳೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಯಾತ್ರಿಕರ ಮೇಲೆ ಕಲ್ಲುಗಳು ಬಿದ್ದಿವೆ ಎನ್ನಲಾಗಿದೆ.
ಭೂಕುಸಿತದ ಪರಿಣಾಮ ಉತ್ತರ ಪ್ರದೇಶದ ಇಟಾ ಮೂಲದ 5 ವರ್ಷದ ಬಾಲಕ ಯಶ್ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಹಲವು ಯಾತ್ರಿಕರು ಮಾರ್ಗದಲ್ಲಿ ಸಿಲುಕಿಕೊಂಡಿದ್ದರು.
ಮಾಹಿತಿ ದೊರೆತ ತಕ್ಷಣ ಸಬ್‌ಇನ್ಸ್‌ಪೆಕ್ಟರ್ ಆಶಿಶ್ ಡಿಮ್ರಿ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಜಂಟಿ ತಂಡ ಸ್ಥಳಕ್ಕೆ ಧಾವಿಸಿದೆ. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಮಾರ್ಗದಲ್ಲಿ ಸಿಲುಕಿಕೊಂಡಿದ್ದ ಸುಮಾರು 1,500 ಯಾತ್ರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಭೂಕುಸಿತದಿಂದಾಗಿ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಳೆ ಹಾಗೂ ಪರ್ವತ ಪ್ರದೇಶಗಳಲ್ಲಿ ಭೂಕುಸಿತದ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಯಾತ್ರಿಕರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.