ಅವಮಾನ ಆದ ನೆಲದಲ್ಲೇ ಕನ್ನಡ ಧ್ವಜ ಹಾರಿಸಿದ ಸುದೀಪ್ | Hosa Suddi

ದೇಶ

ಅವಮಾನ ಆದ ನೆಲದಲ್ಲೇ ಕನ್ನಡ ಧ್ವಜ ಹಾರಿಸಿದ ಸುದೀಪ್

Published

on

ಬೆಂಗಳೂರು: ನಟ ಕಿಚ್ಚ ಸುದೀಪ್ (Sudeep) ಅವರು ಕನ್ನಡ ನಾಡು, ನೆಲ, ಜಲ ಮತ್ತು ಭಾಷೆಯ ಮೇಲಿನ ತಮ್ಮ ಅಚಲ ನಿಷ್ಠೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅವಮಾನವಾಗಿದೆ ಎಂಬ ಆರೋಪಗಳು ಕೇಳಿಬಂದ ಕೆಲವೇ ವಾರಗಳಲ್ಲಿ, ಅದೇ ನೆಲದಲ್ಲಿ ಕನ್ನಡ ಧ್ವಜ ಹಾರಿಸುವ ಮೂಲಕ ಸುದೀಪ್ ಶಕ್ತಿಶಾಲಿ ಸಂದೇಶ ನೀಡಿದ್ದಾರೆ.

ಇತ್ತೀಚೆಗೆ ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದಿಂದ ತೆರಳುತ್ತಿದ್ದ ಮಾಲಾಧಾರಿಗಳಿಗೆ ತೊಂದರೆ ಉಂಟಾದ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಕರ್ನಾಟಕ ಬಾವುಟವಿದ್ದ ವಾಹನಗಳನ್ನು ಅಡ್ಡಗಟ್ಟಿ, ಬಾವುಟಗಳನ್ನು ತೆಗೆಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಈ ಘಟನೆಯನ್ನು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದರು.

ಈ ಹಿನ್ನೆಲೆ ಜನವರಿ 25ರಂದು ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದ ಕರ್ನಾಟಕ ಬುಲ್ಡೋಜರ್ಸ್ vs ಭೋಜ್ಪುರಿ ದಬಾಂಗ್ಸ್ ಕ್ರಿಕೆಟ್ ಪಂದ್ಯ ವಿಶೇಷ ಮಹತ್ವ ಪಡೆದುಕೊಂಡಿತು. ಪಂದ್ಯ ಮುಗಿದ ಬಳಿಕ ಕಿಚ್ಚ ಸುದೀಪ್ ಅವರು ಅದೇ ಮೈದಾನದಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನಿಗಳಿಗೆ ಹೆಮ್ಮೆಯ ಕ್ಷಣ ನೀಡಿದ್ದಾರೆ. “ನಮ್ಮ ನೆಲ, ನಮ್ಮ ಭಾಷೆಗೆ ಅವಮಾನವಾದರೆ ಮೌನವಾಗಿರೋದಿಲ್ಲ” ಎಂಬ ಅರ್ಥಪೂರ್ಣ ಸಂದೇಶವನ್ನು ಸುದೀಪ್ ಈ ಮೂಲಕ ರವಾನಿಸಿದ್ದಾರೆ.

ಪಂದ್ಯದ ವಿಷಯಕ್ಕೆ ಬಂದರೆ, ಕರ್ನಾಟಕ ಬುಲ್ಡೋಜರ್ಸ್ ತಂಡ 20 ಓವರ್‌ಗಳಲ್ಲಿ 202 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಭೋಜ್ಪುರಿ ದಬಾಂಗ್ಸ್ ತಂಡ ಉತ್ತಮ ಆರಂಭ ಪಡೆದರೂ, ಕರ್ನಾಟಕದ ಮಾರಕ ಬೌಲಿಂಗ್ ಎದುರು 184 ರನ್‌ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಬುಲ್ಡೋಜರ್ಸ್ ತಂಡ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಕನ್ನಡವನ್ನು ‘ಕನ್ನಡ್’ ಎಂದು ತಪ್ಪಾಗಿ ಉಚ್ಚರಿಸಿದಾಗ ತಿದ್ದಿದ್ದ ಸುದೀಪ್, ಈಗ ಕನ್ನಡ ಬಾವುಟದ ಗೌರವ ಕಾಪಾಡುವ ಮೂಲಕ ಮತ್ತೆ ಕನ್ನಡಿಗರ ಹೃದಯ ಗೆದ್ದಿದ್ದಾರೆ.

Trending

Exit mobile version