ದೇಶ
ಸುದೀಪ್ ಹೇಳಿಕೆ ವಿವಾದ: ರಾಗಿಣಿ ದ್ವಿವೇದಿ ಹೇಳಿದ್ದೇನು?
ಬಿಗ್ ಸ್ಟಾರ್ ಸಿನಿಮಾಗಳು ಒಂದೇ ಸಮಯದಲ್ಲಿ ಅಥವಾ ಕೆಲವೇ ದಿನಗಳ ಅಂತರದಲ್ಲಿ ಬಿಡುಗಡೆಯಾಗುವಾಗ ಅಭಿಮಾನಿಗಳ ನಡುವೆ ಸ್ಟಾರ್ ವಾರ್, ಫ್ಯಾನ್ ವಾರ್ ನಡೆಯುವುದು ಸಹಜ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದು ಸಿನಿಮಾ ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸುತ್ತದೆ. ಇದೇ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಚಿತ್ರದ ಗ್ರ್ಯಾಂಡ್ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಸುದೀಪ್, “ಕೆಲವು ಮಾತುಗಳನ್ನು ಕಂಟ್ರೋಲ್ ಮಾಡಿಕೊಂಡು ಮಾತನಾಡಲು ಬಯಸುತ್ತೇನೆ. ಹುಬ್ಬಳ್ಳಿಗೆ ಬಂದು ವೇದಿಕೆ ಮೇಲೆ ಹೇಳಿದ ಮಾತು ಇಡೀ ಕರ್ನಾಟಕಕ್ಕೆ ತಟ್ಟುತ್ತದೆ. ಯಾವ ರೀತಿ ತಟ್ಟಬೇಕೋ ಹಾಗೆ ತಟ್ಟುತ್ತದೆ” ಎಂದು ಹೇಳಿದ್ದರು. ಈ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ವಾರ್ ಆರಂಭವಾಗಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ನಟಿ ರಾಗಿಣಿ ದ್ವಿವೇದಿ, “ಸುದೀಪ್ ಅವರು ಏನು ಮಾತನಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಫ್ಯಾನ್ಸ್ ವಾರ್ ಅನ್ನೋದು ಹೊಸದಲ್ಲ. ಬಹಳ ವರ್ಷಗಳಿಂದಲೂ ನಡೆಯುತ್ತಿದೆ. ಆರೋಗ್ಯಕರ ಸ್ಪರ್ಧೆ ಇದ್ದರೆ ಅದರಲ್ಲಿ ತಪ್ಪೇನಿಲ್ಲ” ಎಂದು ಹೇಳಿದ್ದಾರೆ.
ಕಲಾವಿದರಾಗಿ ಎಲ್ಲರೂ ಉತ್ತಮ ಸಿನಿಮಾಗಳನ್ನು ಬಯಸುತ್ತೇವೆ. ಇಲ್ಲಿ ಯಾವುದೇ ವೈಯಕ್ತಿಕ ಟಾರ್ಗೆಟಿಂಗ್ ಇಲ್ಲ. ಎಲ್ಲವೂ ಅವರವರ ಅಭಿಪ್ರಾಯ ಮಾತ್ರ ಎಂದು ರಾಗಿಣಿ ಸ್ಪಷ್ಟಪಡಿಸಿದರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ಬರುತ್ತಿವೆ. ಅವುಗಳನ್ನು ನೋಡಿ ಎಂಜಾಯ್ ಮಾಡಿ, ಸ್ಟಾರ್ ವಾರ್ ಬೇಡ ಎಂದು ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಇನ್ನೊಂದೆಡೆ, ಸುದೀಪ್ ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು, ಸುದೀಪ್ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ. ಅವರು ಹೇಳಿದ್ದು ಪೈರಸಿ ಮಾಡುವವರ ಬಗ್ಗೆ, ವಿರೋಧಿ ಕಲಾವಿದರ ಕುರಿತು ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.