ಬೇಸಿಗೆಯಲ್ಲಿ 40 ಡಿಗ್ರಿ ತಲುಪುವ ಕೊಪ್ಪಳದಲ್ಲಿ ತೀವ್ರ ಚಳಿ: 7.6 ಡಿಗ್ರಿಗೆ ಕುಸಿದ ತಾಪಮಾನ | Hosa Suddi

ದೇಶ

ಬೇಸಿಗೆಯಲ್ಲಿ 40 ಡಿಗ್ರಿ ತಲುಪುವ ಕೊಪ್ಪಳದಲ್ಲಿ ತೀವ್ರ ಚಳಿ: 7.6 ಡಿಗ್ರಿಗೆ ಕುಸಿದ ತಾಪಮಾನ

Published

on

ಕೊಪ್ಪಳ: ಸಾಮಾನ್ಯವಾಗಿ ಬೇಸಿಗೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗುವ ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಚಳಿಯ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಡಿಸೆಂಬರ್ 11ರ ಬೆಳಗ್ಗೆದಿಂದ ಡಿಸೆಂಬರ್ 12ರ ಬೆಳಗ್ಗೆವರೆಗೆ ಕನಿಷ್ಠ 7.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ತಾಪಮಾನದಲ್ಲಿ ದಾಖಲೆ ಮಟ್ಟದ ಇಳಿಕೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆ ವಾಕಿಂಗ್‌ಗೆ ತೆರಳುವವರು ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೆಟರ್, ಜಾಕೆಟ್, ಮಫ್ಲರ್‌ಗಳ ಮೊರೆ ಹೋಗಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನಿಷ್ಠ 10–12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಇದು ಸಾಮಾನ್ಯಕ್ಕಿಂತ ಬಹಳ ಕಡಿಮೆಯಾಗಿದೆ. ಪರಿಣಾಮ ಬೆಳಗ್ಗೆ 6ರಿಂದ 7 ಗಂಟೆಯವರೆಗೆ ದಟ್ಟ ಮಂಜು ಆವರಿಸುತ್ತಿದೆ.

ಮಂಜು ಹಾಗೂ ತೀವ್ರ ಚಳಿಯಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದ್ದು, ಜನರು ಹೊರಗೆ ಓಡಾಡಲು ಹಿಂಜರಿಯುತ್ತಿದ್ದಾರೆ. ವ್ಯಾಪಾರ–ವಹಿವಾಟುಗಳು ಬೆಳಗ್ಗೆ ತಡವಾಗಿ ಆರಂಭವಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಬೆಳಗಿನ ಜಾವ ಜನಸಂಚಾರ ಸ್ಪಷ್ಟವಾಗಿ ಕಡಿಮೆಯಾಗಿದೆ.

ವಿದ್ಯಾರ್ಥಿಗಳು, ಕಾರ್ಮಿಕರಿಗೆ ಸಂಕಷ್ಟ

ಕೇಂದ್ರಿಯ ವಿದ್ಯಾಲಯ ಸೇರಿದಂತೆ ಕೆಲ ಶಾಲೆ–ಕಾಲೇಜುಗಳು ಬೆಳಗ್ಗೆ 8ಕ್ಕೆ ಆರಂಭವಾಗುವುದರಿಂದ ವಿದ್ಯಾರ್ಥಿಗಳು ತೀವ್ರ ಚಳಿಯಿಂದ ಕಂಗಾಲಾಗಿದ್ದಾರೆ. ದಿನಗೂಲಿ ಹಾಗೂ ಕೃಷಿ ಕಾರ್ಮಿಕರು ಬೆಳಗಿನ ಜಾವ ಕೆಲಸಕ್ಕೆ ತೆರಳಲು ಪರದಾಡುತ್ತಿದ್ದಾರೆ. ರಸ್ತೆ ಬದಿ ಹಾಗೂ ವೃತ್ತಗಳಲ್ಲಿ ಜನರು ಬೆಂಕಿ ಕಾಯಿಸಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿವೆ. ಚಳಿಯ ಹೊಡೆತದಿಂದ ಜಾನುವಾರುಗಳೂ ತತ್ತರಿಸಿದ್ದು, ರೈತರು ರಕ್ಷಣೆಗೆ ಮುಂದಾಗಿದ್ದಾರೆ.

ಕೆಎಸ್‌ಎನ್‌ಡಿಎಂಸಿ ಮಾಹಿತಿ, ನೆಟ್ಟಿಗರ ಪ್ರತಿಕ್ರಿಯೆ

ಕೆಎಸ್‌ಎನ್‌ಡಿಎಂಸಿ ತನ್ನ ಎಕ್ಸ್ ಖಾತೆಯಲ್ಲಿ ಜಿಲ್ಲಾವಾರು ತಾಪಮಾನ ವಿವರ ಹಂಚಿಕೊಂಡಿದ್ದು, ಬೀದರ್ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕಡಿಮೆ 4.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮಾಹಿತಿಗೆ ನೆಟ್ಟಿಗರು ಹಾಸ್ಯಮಿಶ್ರಿತ ಪ್ರತಿಕ್ರಿಯೆ ನೀಡಿದ್ದು, “ಬೀದರ್‌ನಲ್ಲಿ ಸ್ನೋ ಬಿದ್ದಿಲ್ಲವೇ?” ಎಂದು ಕಮೆಂಟ್ ಮಾಡಿದ್ದಾರೆ.

ಆರೋಗ್ಯ ಸಮಸ್ಯೆ ಹೆಚ್ಚಳ

ತೀವ್ರ ಚಳಿಯಿಂದ ವೃದ್ಧರು ಮತ್ತು ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಸೇರಿದಂತೆ ಶೀತ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಕ್ಷಯ ರೋಗಿಗಳು ಮತ್ತು ಉಸಿರಾಟದ ತೊಂದರೆ ಇರುವವರಿಗೆ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ.

Trending

Exit mobile version