ದೇಶ
ತಿರುಪತಿಗೆ ಭಕ್ತರ ಮಹಾಪ್ರವಾಹ: KSRTC ಬಸ್‌ಗಳಿಗೆ ರೆಕಾರ್ಡ್ ಡಿಮ್ಯಾಂಡ್!
ಬೆಂಗಳೂರು: ಏಳುಕೊಂಡಲವಾಡ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ರಾಜ್ಯದಾದ್ಯಂತ ಲಕ್ಷಾಂತರ ಭಕ್ತರೆಲ್ಲ ಈಗ ತಿರುಪತಿಯತ್ತ ಮುಖ ಮಾಡುತ್ತಿದ್ದಾರೆ. ವೈಕುಂಠ ಏಕಾದಶಿ, ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ರಜೆಗಳ ಹಿನ್ನೆಲೆಯಲ್ಲಿ ಭಕ್ತರ ಸಂಚಾರ ಗಟ್ಟಿಯಾಗಿದ್ದು, ತಿರುಪತಿಗೆ ತೆರಳುವ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಿಗೆ ಭಾರೀ ಡಿಮ್ಯಾಂಡ್ ಕಂಡುಬಂದಿದೆ.
ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಪ್ರತಿದಿನ ಸುಮಾರು 280 ಬಸ್‌ಗಳು ತಿರುಪತಿ ಮಾರ್ಗದಲ್ಲಿ ಸಂಚರಿಸುತ್ತಿವೆ. ಆದರೆ ಇತ್ತ ಬೃಹತ್ ರಶ್‌ನ ವೇಳೆ ಖಾಸಗಿ ಬಸ್‌ಗಳು ಹೆಚ್ಚಿನ ದರ ವಸೂಲಿಸುತ್ತಿರುವುದರಿಂದ, ಭಕ್ತರು ಸರ್ಕಾರಿ ಬಸ್‌ಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ತಿರುಪತಿ ಮಾರ್ಗಕ್ಕೆ ಹೆಚ್ಚಿನ ಬಸ್‌ಗಳನ್ನು ಸೇರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. “ಜನಸಂದಣಿ ಹೆಚ್ಚಾಗಿರುವ ಕಾರಣ, ನಾಲ್ಕು ಸಾರಿಗೆ ಸಂಸ್ಥೆಗಳೂ ಹೆಚ್ಚುವರಿ ಬಸ್‌ಗಳನ್ನು ಬಿಡುತ್ತವೆ,” ಎಂದು ಅವರು ತಿಳಿಸಿದ್ದಾರೆ.
ತಿರುಪತಿಯಲ್ಲಿ ವಿಶೇಷ ದಿನಗಳು ಮತ್ತು ರಜೆಗಳ ಸಂದರ್ಭಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದರ್ಶನಕ್ಕೆ 3–4 ದಿನಗಳವರೆಗೆ ಕಾಯುವ ಪರಿಸ್ಥಿತಿ ಉಂಟಾಗುತ್ತಿದೆ. ಇದರಿಂದಾಗಿ ಭಕ್ತರು ಟಿಟಿಡಿ (TTD)ಗೆ ಶೀಘ್ರ ದರ್ಶನದ ಟಿಕೆಟ್‌ಗಳನ್ನು ಹೆಚ್ಚುವರಿ ಪ್ರಮಾಣದಲ್ಲಿ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, “ಶೀಘ್ರ ದರ್ಶನದ ಟಿಕೆಟ್ ಸಮಸ್ಯೆಯನ್ನು ನಾವು ಬಹಳ ದಿನಗಳಿಂದ ಟಿಟಿಡಿ ಆಡಳಿತ ಮಂಡಳಿಯ ಮುಂದೆ ಮಂಡಿಸಿದ್ದೇವೆ. ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ,” ಎಂದು ಹೇಳಿದರು.