ದೇಶ

ಸಿದ್ದರಾಮಯ್ಯ ಪರವಾಗಿ ಕುರುಬ ಸಮುದಾಯ ಅಖಾಡಕ್ಕೆ – ಹೈಕಮಾಂಡ್‌ಗೆ ಗಟ್ಟಿಯಾದ ಎಚ್ಚರಿಕೆ

Published

on

  1. ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೆಚ್ಚುತ್ತಿರುವ ಕುರ್ಚಿ ಕಿತ್ತಾಟ ಮತ್ತು ನಾಯಕರ ನಡುವಿನ ಗೊಂದಲದ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯದ ಬ್ಯಾಟಿಂಗ್ ನಡೆದಿದ್ದರೆ, ಈಗ ಸಿಎಂ ಸಿದ್ದರಾಮಯ್ಯ ಪರವಾಗಿ ಕುರುಬ ಸಮಾಜವೂ ನೇರವಾಗಿ ಅಖಾಡಕ್ಕಿಳಿದಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂದು ಸಮುದಾಯದ ನಾಯಕರು ಕಠಿಣ ಎಚ್ಚರಿಕೆ ನೀಡಿದ್ದಾರೆ.
  2. ಇಂದು ಬೆಂಗಳೂರಿನ ಕರ್ನಾಟಕ ಪ್ರದೇಶ ಕುರುಬ ಸಮಾಜ ಕಚೇರಿಯಲ್ಲಿ ಸಮುದಾಯದ ಶ್ರೀಗಳು, ಮುಖಂಡರು ಹಾಗೂ ಸಂಘಟಕರು ತುರ್ತು ಸಭೆ ನಡೆಸಿ, ಸಿಎಂ ಸ್ಥಾನ ಬದಲಾವಣೆಯ ಯಾವುದೇ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ತಿಂಥಣಿ ಮಠದ ಸಿದ್ದರಾಮನಂದಪೂರಿ ಸ್ವಾಮೀಜಿ ಮಾತನಾಡಿ, ರಾಜ್ಯದಾದ್ಯಂತ ಹಲವು ಸಮುದಾಯಗಳಲ್ಲಿ ರಾಜಕೀಯ ಗೊಂದಲ ಪಸರಿಸಿದೆ. ಕುರುಬ ಸಮುದಾಯದವರಲ್ಲಿ ಸಹ ಅಸಮಾಧಾನ ಉಂಟಾಗಿದೆ. ಹೀಗಾಗಿ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    “ಒಬ್ಬ ನಾಯಕ ದೆಹಲಿಗೆ ಹೋಗಿ ಲಾಬಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಘನತೆ ಹೊಂದಿರುವ ಸಿದ್ದರಾಮಯ್ಯರ ವಿರುದ್ಧ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕೇವಲ ಕರ್ನಾಟಕವನ್ನೇ ಅಲ್ಲ, ದೇಶದ ರಾಜಕೀಯ ಸಮತೋಲನಕ್ಕೂ ದುಷ್ಪರಿಣಾಮ ಉಂಟುಮಾಡುತ್ತದೆ,” ಎಂದು ಸ್ವಾಮೀಜಿ ಹೇಳಿಕೆ ನೀಡಿದರು.

    ಅವರು ಮುಂದುವರಿಸಿ—“ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯದವರೆಂದು ನಾವು ಬೆಂಬಲಿಸುತ್ತಿಲ್ಲ. ಅಹಿಂದ ಸಮುದಾಯದ ಮುಖಂಡರಾಗಿ, ಬಡವರು ಹಾಗೂ ದೀನದಲಿತರ ಪರವಾಗಿ ಕೆಲಸ ಮಾಡಿರುವ ಕಾರಣಕ್ಕೆ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಬೇಕು. ಹೈಕಮಾಂಡ್ ತಾರ್ಕಿಕ ಮತ್ತು ನ್ಯಾಯೋಚಿತ ನಿರ್ಧಾರ ತೆಗೆದುಕೊಳ್ಳಬೇಕು,” ಎಂದು ಒತ್ತಿ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ನಾಯಕರು ಹೇಳಿದ್ದಾರೆ:

    ಕುರುಬ ಸಮುದಾಯದ ಮುಖಂಡರು ಗಟ್ಟಿಯಾಗಿ ಹೇಳಿರುವುದೇನೆಂದರೆ—
    “ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬಾರದು. 140 ಶಾಸಕರ ಪೈಕಿ ಯಾರ್ ಸಿದ್ದರಾಮಯ್ಯ ವಿರುದ್ಧ ಇದ್ದಾರೋ ಅವರನ್ನು ಮುಂದಿನ ಚುನಾವಣೆಯಲ್ಲಿ ನಾವು ತೊಡಗಿಸಿಕೊಂಡು ಸೋಲಿಸುತ್ತೇವೆ.”

    ಅವರು ಮತ್ತಷ್ಟು ಕಿಡಿಕಾರುತ್ತಾ—
    “ಜೈಲಿಗೆ ಹೋಗಿ ಬಂದವರು, ಭ್ರಷ್ಟಾಚಾರದ ಆರೋಪ ಹೊಂದಿರುವವರನ್ನು ಸಿಎಂ ಮಾಡಲು ಯತ್ನಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡುವ ನಿರ್ಧಾರ. ಅಗತ್ಯವಿದ್ದರೆ ರಾಜ್ಯವ್ಯಾಪಿ ಪ್ರಚಾರ ನಡೆಸಿ ಕಾಂಗ್ರೆಸ್ ವಿರುದ್ಧ ಬಹಿಷ್ಕಾರ ಘೋಷಿಸುತ್ತೇವೆ,” ಎಂದರು.

    ಉತ್ತರ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸಿದ್ದರಾಮಯ್ಯರ ಜನಮಾನಸ Congress ಗೆ ಬಲಕೊಟ್ಟಿದೆ ಎಂದು ನಾಯಕರ ಮಂಡಳಿ ಸ್ಪಷ್ಟಪಡಿಸಿದೆ. “ಪಕ್ಷದಲ್ಲಿ ಮಾಸ್ ಲೀಡರ್ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ; ಡಿಕೆಶಿ ಸೇರಿದಂತೆ ಬೇರೆ ಯಾರೂ ಆ ಮಟ್ಟದ ಜನಪ್ರಿಯತೆ ಹೊಂದಿಲ್ಲ. ಅಗತ್ಯವಿದ್ದರೆ ಪ್ರಾದೇಶಿಕ ಪಕ್ಷ ಸ್ಥಾಪನೆಗೂ ನಾವು ಹಿಂದೆ ಮುಂದೆ ನೋಡುವುದಿಲ್ಲ,” ಎಂದೂ ಸ್ಪಷ್ಟ ಸಂದೇಶ ನೀಡಿದರು.

Trending

Exit mobile version