ದೇಶ
LOC ಬಳಿ ನೆಲಬಾಂಬ್ ಸ್ಫೋಟ: ಇಬ್ಬರು ಯೋಧರಿಗೆ ಗಂಭೀರ ಗಾಯ, ಪಹಲ್ಗಾಮ್ನಲ್ಲಿ ಮೇಘಸ್ಫೋಟದಿಂದ ಪ್ರವಾಹ
ಶ್ರೀನಗರ: ಜಮ್ಮು-ಕಾಶ್ಮೀರದ ಮೆಂಧರ್ ಸೆಕ್ಟರ್ನ ಕಂಗಾ ಗಾಲಿ ಪ್ರದೇಶದಲ್ಲಿ ನಿಯಂತ್ರಣ ರೇಖೆ (LOC) ಸಮೀಪ ನೆಲಬಾಂಬ್ (Landmine) ಸ್ಫೋಟಗೊಂಡ ಪರಿಣಾಮ ಭಾರತೀಯ ಸೇನೆಯ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಭಾರಿ ಮಳೆಯಿಂದ ಸೇನೆಯ ಒಳನುಸುಳುವಿಕೆ ತಡೆ ವ್ಯವಸ್ಥೆಯ ಭಾಗವಾಗಿ ಅಳವಡಿಸಿದ್ದ ಕೆಲವು ನೆಲಬಾಂಬ್ಗಳು ಸ್ಥಳಾಂತರಗೊಂಡಿದ್ದವು. ಗಸ್ತು ತಿರುಗುತ್ತಿದ್ದ ಯೋಧರು ಅನುಮಾನಾಸ್ಪದ ಸ್ಫೋಟಕವನ್ನು ಗುರುತಿಸಿದ ಬಳಿಕ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿತ್ತು. ಆದರೆ ಅದನ್ನು ನಿಷ್ಕ್ರಿಯಗೊಳಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ.
ಇದೇ ವೇಳೆ, ನಲ್ವಾ ದೇಗ್ವಾರ್ ಟೆರ್ವಾನ್ ಪ್ರದೇಶದಲ್ಲಿ ತುಕ್ಕು ಹಿಡಿದ ಸ್ಫೋಟಗೊಳ್ಳದ ಫಿರಂಗಿ (Unexploded Shell) ಪತ್ತೆಯಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಇದನ್ನು ಗಮನಿಸಿದ ಬಳಿಕ ಸೇನೆಯ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿದ್ದು, ನಂತರ ಸುರಕ್ಷಿತವಾಗಿ ಸ್ಫೋಟಕವನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.
ಇನ್ನೊಂದೆಡೆ, ಕಾಶ್ಮೀರ ಕಣಿವೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪಹಲ್ಗಾಮ್ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ ಹಠಾತ್ ಪ್ರವಾಹ ಉಂಟಾಗಿದೆ. ಅನಂತ್ನಾಗ್ ಜಿಲ್ಲೆಯ ಬಟ್ಕೂಟ್ ಪ್ರದೇಶದಲ್ಲಿ ಅರಣ್ಯ ಜಲಾನಯನ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಲಿಡ್ಡರ್ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ.
ಭಾರಿ ಮಳೆಯ ಪರಿಣಾಮ ಐಶ್ಮುಖಂ–ಪಹಲ್ಗಾಮ್ ರಸ್ತೆಯ ಲ್ಯಾಂಗ್ನೈ ಸೇತುವೆ ಸಮೀಪ ರಸ್ತೆ ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಲ್ಯಾಂಗ್ನೈ–ಬಟ್ಕೂಟ್ ಸೇತುವೆಯೂ ಪ್ರವಾಹದ ನೀರಿನಿಂದ ಹಾನಿಗೊಳಗಾಗಿದೆ. ಶೋಪಿಯಾನ್, ಬಂಡಿಪೋರಾ, ಕುಪ್ವಾರಾ ಹಾಗೂ ಪಹಲ್ಗಾಮ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಅಗತ್ಯವಿಲ್ಲದೆ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಬಾರದು ಎಂದು ಆಡಳಿತ ಎಚ್ಚರಿಕೆ ನೀಡಿದೆ.