ಅಪರಾಧ
ಲಕ್ನೋದಲ್ಲಿ ಹಿಂದೂ ದೇವತೆಗಳ ವಿರುದ್ಧ ರೀಲ್ಸ್ ಮಾಡಿದ ಬಾಲಕಿ ಬಂಧನ: ಪೋಷಕರಿಗೂ ಶಿಕ್ಷೆ!
ಲಕ್ನೋ: ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ರೀಲ್ಸ್ ಮಾಡಿದ್ದ ಬಾಲಕಿಯೊಬ್ಬಳ ಕೃತ್ಯ ಇದೀಗ ಆಕೆಯ ಪೋಷಕರಿಗೂ ಕಂಟಕವಾಗಿದೆ. ಪೊಲೀಸರು ಬಾಲಕಿಯನ್ನು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದು, ಪೋಷಕರನ್ನೂ ಕಾನೂನು ಬಲೆಗೆ ಸಿಕ್ಕಿಸಿದ್ದಾರೆ.
ಅಕ್ಟೋಬರ್ 27ರಂದು ಆಕೆ ಒಂದು ನಿಮಿಷದ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಹಿಂದೂ ದೇವತೆಗಳನ್ನು ಟೀಕಿಸಿದ್ದಳು. ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಹಿಂದೂ ಸಂಘಟನೆಗಳು ಬಾಲಕಿ ಮತ್ತು ಆಕೆಯ ಕುಟುಂಬದ ವಿರುದ್ಧ ಪ್ರತಿಭಟನೆ ನಡೆಸಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕ್ರಮಕೈಗೊಂಡರು. ಪ್ರಸ್ತುತ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯು ಪರಾರಿಯಾಗಿದ್ದು, ಆತನ ವಿರುದ್ಧವೂ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಪೊಲೀಸರು ಹೇಳುವಂತೆ, “ಬಾಲಕಿಯ ಪೋಷಕರಿಗೆ ವಿಷಯದ ಬಗ್ಗೆ ತಿಳಿದಿದ್ದರೂ ಅವರು ತಡೆಯಲು ವಿಫಲರಾದರು. ವೀಡಿಯೋವನ್ನು ಹಂಚಿಕೊಳ್ಳುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಜನರು ವೀಡಿಯೋವನ್ನು ವೈರಲ್ ಮಾಡಬಾರದು,” ಎಂದು ಎಚ್ಚರಿಕೆ ನೀಡಲಾಗಿದೆ.
ಈ ವೇಳೆ ಬಾಲಕಿಯು ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚನೆ ಸಲ್ಲಿಸಿರುವ ವಿಡಿಯೋವೂ ಹೊರಬಂದಿದೆ. “ನಾನು ತಪ್ಪು ಮಾಡಿದ್ದೇನೆ, ಕ್ಷಮೆಯಾಚಿಸುತ್ತೇನೆ, ಮತ್ತೆಂದೂ ಹೀಗೆ ಮಾಡುವುದಿಲ್ಲ,” ಎಂದು ಆಕೆ ಜನರಿಗೆ ಮನವಿ ಮಾಡಿದ್ದಾಳೆ.