ದೇಶ
ಪ್ರಧಾನಿ ಮೋದಿ ಜೀವನಾಧಾರಿತ ‘ಮಾ ವಂದೇ’ ಚಿತ್ರ ಘೋಷಣೆ: ಉನ್ನಿ ಮುಕುಂದನ್ ಪ್ರಧಾನ ಪಾತ್ರದಲ್ಲಿ
ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ, ಈ ವಿಶೇಷ ದಿನದ ಅಂಗವಾಗಿ 'ಮಾ ವಂದೇ' ಎಂಬ ಜೀವನಾಧಾರಿತ ಚಿತ್ರವನ್ನು ಘೋಷಿಸಲಾಗಿದೆ. ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ವೀರ್ ರೆಡ್ಡಿ ಎಂ. ಇದರ ನಿರ್ಮಾಪಕರಾಗಿದ್ದಾರೆ.
ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್, ನರೇಂದ್ರ ಮೋದಿ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕ್ರಾಂತಿ ಕುಮಾರ್ ಸಿ.ಎಚ್. ನಿರ್ದೇಶನದ ಈ ಸಿನಿಮಾ, ಪ್ರೇಕ್ಷಕರ ಎಲ್ಲಾ ವರ್ಗಗಳನ್ನು ಗುರಿಯಾಗಿರಿಸಿಕೊಂಡು ನಿರ್ಮಿಸಲಾಗುತ್ತಿದ್ದು, ಮೋದಿ ಅವರ ಬಾಲ್ಯದಿಂದ ಆರಂಭಿಸಿ ಭಾರತದ ಪ್ರಧಾನಿಯಾಗುವವರೆಗಿನ ಶ್ರದ್ಧೆಯ ಪ್ರಯಾಣವನ್ನು ಚಿತ್ರಿಸುತ್ತದೆ.
ನಿರ್ಮಾಪಕ ವೀರ್ ರೆಡ್ಡಿ ತಿಳಿಸಿದ್ದಾರೆ:
“ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ಅವರ ಜೀವನ ಚರಿತ್ರೆಯಾದ ‘ಮಾ ವಂದೇ’ ಚಿತ್ರವನ್ನು ಘೋಷಿಸುತ್ತಿದ್ದೇವೆ. ಈ ಸಿನಿಮಾ ಮೋದಿ ಅವರ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿದೆ.”
ಚಿತ್ರವನ್ನು ಎಲ್ಲಾ ಪ್ಯಾನ್-ಇಂಡಿಯಾ ಭಾಷೆಗಳಲ್ಲಿ, ಜೊತೆಗೆ ಇಂಗ್ಲಿಷ್ ಭಾಷೆಯಲ್ಲೂ ಬಿಡುಗಡೆ ಮಾಡಲಾಗುವುದು. ವಿಶೇಷವಾಗಿ ಮೋದಿಯವರ ತಾಯಿ ಹೀರಾಬೆನ್ ಅವರೊಂದಿಗೆ ಇರುವ ಬಾಂಧವ್ಯವನ್ನು ಭಾವನಾತ್ಮಕವಾಗಿ ಚಿತ್ರದಲ್ಲಿ ತೋರಿಸಲಾಗುತ್ತದೆ.
“ರಾಷ್ಟ್ರ ಸೇವೆಗೆ ತನ್ನನ್ನು ಅರ್ಪಿಸಿದ ನಾಯಕನ ದೃಢ ನಡಿಗೆ ಮತ್ತು ಸಾಧನೆಗಳನ್ನು ಈ ಚಿತ್ರವು ವಿಶ್ವದಾದ್ಯಾಂತ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶ ಹೊಂದಿದೆ,” ಎಂದಿದ್ದಾರೆ ನಿರ್ದೇಶಕರು.