ಮಂಡ್ಯದಲ್ಲಿ 500 ಎಕರೆ ಕೈಗಾರಿಕಾ ಹಬ್ ಯೋಜನೆಗೆ ಗ್ರೀನ್ ಸಿಗ್ನಲ್ | Hosa Suddi

ದೇಶ

ಮಂಡ್ಯದಲ್ಲಿ 500 ಎಕರೆ ಕೈಗಾರಿಕಾ ಹಬ್ ಯೋಜನೆಗೆ ಗ್ರೀನ್ ಸಿಗ್ನಲ್

Published

on

By

ಬೆಂಗಳೂರು: ಮಂಡ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಇಂದು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಯಿತು. ಸುಮಾರು ಎರಡು ವರ್ಷಗಳ ಬಳಿಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸೌಧಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದರು.

ಸಭೆ ಬಳಿಕ ಮಾತನಾಡಿದ ಪಾಟೀಲ್, ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕಾ ಹಬ್ ನಿರ್ಮಾಣಕ್ಕೆ ಮೊದಲ ಹಂತವಾಗಿ 100 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದರು. Automotive Research Association of India (ಎಆರ್‌ಎಐ) ಕೇಂದ್ರ ಸ್ಥಾಪನೆಗೆ ಈ ಜಾಗವನ್ನು ಮೀಸಲಿಡಲಾಗಿದ್ದು, ಪೂರಕ ಕೈಗಾರಿಕಾ ಅಭಿವೃದ್ಧಿಗೆ 500 ಎಕರೆ ಜಾಗದ ಅಗತ್ಯವಿದೆ ಎಂದು ತಿಳಿಸಿದರು.

“ಕೇವಲ 100 ಎಕರೆಯಲ್ಲಿ ಕೇಂದ್ರ ಸ್ಥಾಪಿಸಿದರೆ ಅದು ಒಂದೇ ಘಟಕವಾಗಿರುತ್ತದೆ. ಆದರೆ 500 ಎಕರೆಯಲ್ಲಿ ಸಮಗ್ರ ಕೈಗಾರಿಕಾ ಹಬ್ ನಿರ್ಮಿಸಿದರೆ ವಾಹನೋದ್ಯಮ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ,” ಎಂದು ಪಾಟೀಲ್ ಹೇಳಿದರು. ಈ ಪ್ರಸ್ತಾವನೆಗೆ ಕುಮಾರಸ್ವಾಮಿ ಸಹ ಒಪ್ಪಿಗೆ ಸೂಚಿಸಿದ್ದಾರೆ.

ಇದೀಗ ಮಂಡ್ಯ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಜಮೀನನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಸರಾಳು ಬಳಿ 105 ಎಕರೆ ಜಾಗ ಈಗಾಗಲೇ ಗುರುತಿಸಲಾಗಿದ್ದು, ಬೆಳ್ಳೂರು ಪ್ರದೇಶದಲ್ಲಿರುವ 425 ಎಕರೆ ಭೂಮಿಯನ್ನೂ ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.

ಕೈಗಾರಿಕಾ ಹಬ್ ನಿರ್ಮಾಣವಾದರೆ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಜೊತೆಗೆ Andrew Yule Company Limited ಸಂಸ್ಥೆಯೂ ಮಂಡ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು 25–50 ಎಕರೆ ಭೂಮಿ ಬೇಡಿಕೆ ಇಟ್ಟಿದೆ.

ಅಧಿಕಾರಿಗಳ ವರದಿ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ.

Trending

Exit mobile version