ದೇಶ
ಮಂಗಳೂರಿನಲ್ಲಿ ಖಾಸಗಿ ಇವಿ ಬಸ್ಗಳಿಗೂ ಚಾಲನೆ: 750 ಇ-ಬಸ್ ಯೋಜನೆಗೆ ಸ್ಪರ್ಧೆ
ಮಂಗಳೂರು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ರಾಜ್ಯಕ್ಕೆ 750 ಹೊಸ ಎಲೆಕ್ಟ್ರಿಕ್ ಬಸ್ಗಳು ಮಂಜೂರಾಗಿದ್ದು, ಅದರ ಪೈಕಿ 100 ಬಸ್ಗಳು Mangaluru ನಗರಕ್ಕೆ ಬರಲಿವೆ. ಈ ಬೆಳವಣಿಗೆ ಖಾಸಗಿ ಸಾರಿಗೆ ವಲಯಕ್ಕೆ ಸವಾಲಾಗಿದ್ದು, ಸರ್ಕಾರದ ಬಸ್ಗಳಿಗಿಂತ ಮೊದಲು ಖಾಸಗಿ ಇವಿ ಬಸ್ಗಳನ್ನು ರಸ್ತೆಗಿಳಿಸುವ ಸಿದ್ಧತೆ ನಡೆಯುತ್ತಿದೆ.
ಕೇಂದ್ರದ Ministry of Housing and Urban Affairs ರಾಜ್ಯಕ್ಕೆ ಇ-ಬಸ್ಗಳನ್ನು ಮಂಜೂರು ಮಾಡಿದ್ದು, ಮಂಗಳೂರು ನಗರದ ವಿವಿಧ ಮಾರ್ಗಗಳಲ್ಲಿ ಅವು ಓಡಾಟ ನಡೆಸಲಿವೆ. ಕುಂಟಿಕಾನ ಕೆಎಸ್ಆರ್ಟಿಸಿ ಡಿಪೋ ಹಾಗೂ ಬಿಜೈ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಗೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅನುಮೋದನೆ ನೀಡಿವೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ 6 ತಿಂಗಳೊಳಗೆ ನಗರದಲ್ಲಿ ಸರಕಾರಿ ಇವಿ ಬಸ್ ಸೇವೆ ಆರಂಭವಾಗಲಿದೆ.
ಖಾಸಗಿ ಇವಿ ಬಸ್ಗಳ ವಿಶೇಷತೆ
9 ಮೀಟರ್ ಉದ್ದದ ಈ ಬಸ್ಗಳು 32–41 ಆಸನ ಸಾಮರ್ಥ್ಯ ಹೊಂದಿದ್ದು, 200 ಕಿಮೀ ಓಡಾಟದ ಬ್ಯಾಟರಿ ಶಕ್ತಿ ಹೊಂದಿವೆ. ಕೇವಲ 2 ಗಂಟೆಗಳಲ್ಲಿ ರೀಚಾರ್ಜ್ ಆಗುವ ವ್ಯವಸ್ಥೆ, ಹವಾನಿಯಂತ್ರಣ ಸೌಲಭ್ಯ ಹಾಗೂ 5 ವರ್ಷದ ಬ್ಯಾಟರಿ ಗ್ಯಾರಂಟಿ ಇವುಗಳ ವಿಶೇಷತೆ. ಬಸ್ ಬಾಡಿ ವಿನ್ಯಾಸವನ್ನು ಪುಣೆಯಲ್ಲಿ ತಯಾರಿಸಲಾಗುತ್ತಿದೆ.
ಮಂಗಳೂರು ನಗರವು ದೇಶದ ಮೊದಲ ಖಾಸಗಿ ಬಸ್ ಸೇವೆ ಆರಂಭವಾದ ಸ್ಥಳವಾಗಿದ್ದು, 1914ರಲ್ಲಿ ಮಂಗಳೂರು–ಬಂಟ್ವಾಳ ಮಾರ್ಗದಲ್ಲಿ ಖಾಸಗಿ ಸಾರಿಗೆ ಆರಂಭಗೊಂಡಿತ್ತು. ಇದೀಗ ಇವಿ ಬಸ್ ವ್ಯವಸ್ಥೆಯಲ್ಲೂ ಮಂಗಳೂರು ಮಾದರಿಯಾಗಲು ಸಜ್ಜಾಗಿದೆ.
ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ರಾಜ್ ಆಳ್ವ ಅವರು, “ಪರಿಸರದ ನೆಪದಲ್ಲಿ ಸರ್ಕಾರ ಏಕಾಏಕಿ 100 ಇವಿ ಬಸ್ಗಳನ್ನು ಓಡಿಸಲು ನಿರ್ಧರಿಸಿದೆ. ಇದರಿಂದ ಖಾಸಗಿ ವಲಯಕ್ಕೂ ಇವಿ ಬಸ್ ಖರೀದಿ ಅನಿವಾರ್ಯವಾಗಿದೆ” ಎಂದು ತಿಳಿಸಿದ್ದಾರೆ.