ದೇಶ
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವಕ್ಕೆ ಶುಕ್ರವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಶ್ರೀಮಠದ ಮುಂಭಾಗದಲ್ಲಿ ಸಾಂಪ್ರದಾಯಿಕ ಧ್ವಜಾರೋಹಣ ಸಮಾರಂಭವು ಅಪಾರ ಭಕ್ತಿ ಮತ್ತು ಭವ್ಯತೆಯಿಂದ ನೆರವೇರಿತು.
ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಗೋ ಪೂಜೆ ಮತ್ತು ಅಶ್ವ ಪೂಜೆ ನೆರವೇರಿಸಿ, ವೇದ ಪಠಣ ಮತ್ತು ಮಂಗಳವಾದ್ಯಗಳೊಂದಿಗೆ ಧ್ವಜಾರೋಹಣ ನಡೆಸಿದರು. ಅಪಾರ ಸಂಖ್ಯೆಯ ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು.
ನಂತರ, ಶ್ರೀ ಯೋಗೀಂದ್ರ ಸಭಾಮಂದಿರದಲ್ಲಿ ದೀಪ ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ವಾಮೀಜಿಯವರು ಉದ್ಘಾಟಿಸಿದರು. ಸಪ್ತ ರಾತ್ರೋತ್ಸವದ ಮೊದಲ ದಿನ ಧಾನ್ಯ ಪೂಜೆಯನ್ನು ನೆರವೇರಿಸಲಾಯಿತು. ರಾಯರ ಮೂಲ ಬೃಂದಾವನದ ಬಳಿಯ ಕಂಬಕ್ಕೆ ಭಕ್ತರು ನೀಡಿರುವ ಚಿನ್ನದ ಕವಚಗಳನ್ನು ಅಳವಡಿಸಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಆಗಸ್ಟ್ 14ರವರೆಗೆ ಸಪ್ತ ರಾತ್ರೋತ್ಸವ ಮಂತ್ರಾಲಯದಲ್ಲಿ ಜರುಗಲಿದೆ.