“ಸಂವಿಧಾನಕ್ಕೆ ಅಪಚಾರ” – ಖರ್ಗೆ ತೀವ್ರ ವಾಗ್ದಾಳಿ | Hosa Suddi

ದೇಶ

“ಸಂವಿಧಾನಕ್ಕೆ ಅಪಚಾರ” – ಖರ್ಗೆ ತೀವ್ರ ವಾಗ್ದಾಳಿ

Published

on

ಹೊಸದಿಲ್ಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ರದ್ದಾದ ವಿಚಾರ ಈಗ ರಾಜ್ಯಸಭೆಯಲ್ಲೂ ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಫೆಬ್ರವರಿ 5ರಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನ ಬಜೆಟ್ ಅಧಿವೇಶನ ಸಂಪೂರ್ಣ ಗದ್ದಲಕ್ಕೆ ಸಾಕ್ಷಿಯಾಯಿತು.

ಸದನ ಆರಂಭವಾಗುತ್ತಿದ್ದಂತೆಯೇ, ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ರದ್ದಾಗಿದ್ದನ್ನು ಪ್ರಶ್ನಿಸಿದ ಪ್ರತಿಪಕ್ಷ ಸದಸ್ಯರು, ಗದ್ದಲದ ನೆಪ ಹೇಳಿ ಪ್ರಧಾನಿ ಭಾಷಣದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದು ಸದನದ ಸಂಪ್ರದಾಯ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಅವರು ಗುಡುಗಿದರು.

ರಾಜ್ಯಸಭೆ ಕಲಾಪ ಆರಂಭಕ್ಕೂ ಮುನ್ನ, ಬೆಳಗ್ಗೆ 10 ಗಂಟೆಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಪ್ರತಿಪಕ್ಷ ಸಂಸದರು ಸಭೆ ನಡೆಸಿದರು. ಇದೇ ವೇಳೆ ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,
“ಪ್ರಧಾನಿ ಲೋಕಸಭೆಯಲ್ಲಿ ಮಾತನಾಡುವುದಿಲ್ಲ. ವಿಪಕ್ಷ ನಾಯಕ ಮಾತನಾಡಲು ಎದ್ದು ನಿಂತರೆ ಅವಕಾಶ ನೀಡುವುದಿಲ್ಲ. ಈ ರೀತಿ ಸದನ ನಡೆಸುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಚಾರ” ಎಂದು ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, “ಪ್ರಧಾನಿ ಮೋದಿ ಮಾತನಾಡಲು ಸಿದ್ಧರಿದ್ದರು. ಆದರೆ ಪ್ರತಿಪಕ್ಷಗಳ ಪ್ರತಿಭಟನೆಗಳಿಂದ ಸಾಧ್ಯವಾಗಲಿಲ್ಲ” ಎಂದು ಸ್ಪಷ್ಟನೆ ನೀಡಿದರು.
“ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ನಿಮ್ಮ ಆರೋಪವನ್ನು ನಾನು ತಿರಸ್ಕರಿಸುತ್ತೇನೆ. ಮೊದಲು ನಿಮ್ಮ ಪಕ್ಷದೊಳಗೆ ಪ್ರಜಾಸತ್ತಾತ್ಮಕವಾಗಿ ವರ್ತಿಸಿ” ಎಂದು ಖರ್ಗೆ ವಿರುದ್ಧ ತೀಕ್ಷ್ಣ ವ್ಯಂಗ್ಯವಾಡಿದರು.

ಜೆ.ಪಿ. ನಡ್ಡಾ ಅವರ ಹೇಳಿಕೆಯಿಂದ ಕೆರಳಿದ ಪ್ರತಿಪಕ್ಷ ಸದಸ್ಯರು ಆಡಳಿತ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಸಭಾಪತಿಗಳು ಗದ್ದಲ ಶಮನಕ್ಕೆ ಪ್ರಯತ್ನ ಮುಂದುವರೆಸಿದರು.

ಸಂಸತ್ತಿನ ಬಜೆಟ್ ಅಧಿವೇಶನವು ಒಟ್ಟು 65 ದಿನಗಳಲ್ಲಿ 30 ಸಭಾ ದಿನಗಳನ್ನು ಒಳಗೊಂಡಿದ್ದು, ಏಪ್ರಿಲ್ 2ರಂದು ಮುಕ್ತಾಯಗೊಳ್ಳಲಿದೆ. ಫೆಬ್ರವರಿ 13ರಂದು ವಿರಾಮ ಪಡೆದು, ಮಾರ್ಚ್ 9ರಂದು ಮತ್ತೆ ಅಧಿವೇಶನ ಆರಂಭವಾಗಲಿದೆ.

Trending

Exit mobile version