ಪ್ರಧಾನಿ ಮೋದಿ ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ – ಭವ್ಯ ‘ಲಕ್ಷ ಕಂಠ ಗೀತಾ ಪಠಣ’ಕ್ಕೆ ಸಿದ್ಧತೆ ಪೂರ್ಣ | Hosa Suddi

ದೇಶ

ಪ್ರಧಾನಿ ಮೋದಿ ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ – ಭವ್ಯ ‘ಲಕ್ಷ ಕಂಠ ಗೀತಾ ಪಠಣ’ಕ್ಕೆ ಸಿದ್ಧತೆ ಪೂರ್ಣ

Published

on

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ನಡೆಯಲಿರುವ **‘ಲಕ್ಷ ಕಂಠ ಗೀತಾ ಪಠಣ ಸಮಾವೇಶ’**ದಲ್ಲಿ ಭಾಗವಹಿಸಲಿದ್ದಾರೆ. ಈ ಭವ್ಯ ಕಾರ್ಯಕ್ರಮಕ್ಕಾಗಿ ಸುಮಾರು 25 ಸಾವಿರ ಜನರು ಕುಳಿತುಕೊಳ್ಳುವಂತ ಸುಸಜ್ಜಿತ ಪೆಂಡಾಲ್ ಸಿದ್ಧವಾಗಿದೆ. ವಿಐಪಿ, ವಿವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಗೀತಾ ಪಠಣ ವ್ಯವಸ್ಥೆಯನ್ನು ಮಾಡಲಾಗಿದೆ.

ನಿರ್ವಹಣಾ ವ್ಯವಸ್ಥೆಯಲ್ಲಿ ಕಟ್ಟು ನಿಟ್ಟಿನ ನಿಯಮಗಳು

ವೇದಿಕೆ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಪೆಂಡಾಲಿನಲ್ಲಿ ಐದು ಬೃಹತ್ ಫ್ಯಾನುಗಳನ್ನು ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಠವೇ ಮಾಡಿರುವುದರಿಂದ ನೀರಿನ ಬ್ಯಾಗ್, ಬಾಟಲ್, ತಿಂಡಿ ತಿನಿಸು ತರಲು ಅನುಮತಿ ಇಲ್ಲ. ಕಾರ್ಯಕ್ರಮದ ನಂತರ ಸಾವಿರಾರು ಜನರಿಗೆ ಊಟೋಪಚಾರ ವ್ಯವಸ್ಥೆಯೂ ಇದೆ.

40 ನಿಮಿಷ ಮುಂಚಿತವಾಗಿ ಮೋದಿಯವರ ಆಗಮನ

ಪೂರ್ವನಿಗದಿತ ವೇಳಾಪಟ್ಟಿಯಂತೆ ಪ್ರಧಾನಿ ಮೋದಿ ಬೆಳಗ್ಗೆ 8.15ಕ್ಕೆ ದಿಲ್ಲಿಯಿಂದ ಹೊರಟು ಮಂಗಳೂರು ಮೂಲಕ 11.35ಕ್ಕೆ ಉಡುಪಿ ತಲುಪುವರು ಎಂದು ತಿಳಿಸಲಾಗಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ ಬದಲಾವಣೆಯಾಗಿದ್ದು, ಪ್ರಧಾನಿ ಸುಮಾರು 40 ನಿಮಿಷ ಬೇಗನೆ ಉಡುಪಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 11ರಿಂದ 11.30ರೊಳಗೆ ರೋಡ್‌ಶೋ, ನಂತರ ಕೃಷ್ಣ ಮಠ ದರ್ಶನ, ಪಾರಾಯಣ ಕಾರ್ಯಕ್ರಮ ಪೂರೈಸಿ ಮಧ್ಯಾಹ್ನ 1 ಗಂಟೆಗೆ ಉಡುಪಿಯಿಂದ ನಿರ್ಗಮಿಸಲಿದ್ದಾರೆ ಎಂದು ಜಿಲ್ಲೆ ಎಸ್‌.ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಖಾಕಿ ಸರ್ಪಗಾವಲು – ಕಟ್ಟೆಚ್ಚರ ಕ್ರಮಗಳು ಜಾರಿಯಲ್ಲಿ

ಪ್ರಧಾನಿ ಆಗಮನದ ಹಿನ್ನೆಲೆ ಉಡುಪಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಬನ್ನಂಜೆ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದಿಂದ ಕಲ್ಸಂಕವರೆಗೆ ರೋಡ್‌ಶೋ ನಡೆಯಲಿದ್ದು, ಇಲ್ಲಿ ಎರಡೂ ಕಡೆಯಲ್ಲೂ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಈ ಪ್ರದೇಶದ ಅಂಗಡಿ ಮಾಲೀಕರಿಗೆ ಅಂದು ಅಂಗಡಿ ತೆರೆಯಬಾರದೆಂದು ಸೂಚಿಸಿದೆ.

ನ.28ರಂದು ರಸ್ತೆ ಅಗೆಯುವಂತಿಲ್ಲ, ಡ್ರೋನ್ ಹಾರಿಸುವಂತಿಲ್ಲ

ಜಿಲ್ಲಾಡಳಿತವು ನವೆಂಬರ್ 28ರಂದು ನಗರದಲ್ಲಿ ಯಾವುದೇ ರಸ್ತೆ ಕಾಮಗಾರಿ, ಹೊಂಡ ತೋಡುವುದು ಮುಂತಾದ ಕೆಲಸಗಳು ನಿರ್ಬಂಧಿಸಿದೆ. ಇದೇ ರೀತಿ ಪರವಾನಗಿ ಇಲ್ಲದೆ ಡ್ರೋನ್ ಹಾರಿಸುವುದಕ್ಕೂ ಸಂಪೂರ್ಣ ನಿಷೇಧ ಜಾರಿಯಲ್ಲಿದೆ.

Trending

Exit mobile version