ದೇಶ
ಮೈಸೂರು ದಸರಾ 2025: 416ನೇ ಜಂಬೂ ಸವಾರಿಗೆ ಚಾಲನೆ
ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ 2025 ಉತ್ಸವದಲ್ಲಿ 416ನೇ ಜಂಬೂ ಸವಾರಿ ಮೆರವಣಿಗೆ ಅದ್ಭುತವಾಗಿ ನಡೆಯಿತು. ಆರನೇ ಬಾರಿ ಅಂಬಾರಿ ಹೊತ್ತು ಅರಮನೆ ಬಲರಾಮ ಬಾಗಿಲಿಂದ ಹೊರಬಂದಿದ್ದ ಅಭಿಮನ್ಯುನ್ನು ಈ ಸಂದರ್ಭ ಬಹುಮಾನಿತ ಗಣ್ಯರು ಹಾಗೂ ಶ್ರದ್ಧಾಳು ಜನರ ನಡುವೆ ವೀಕ್ಷಿಸಿದರು.
ಅಭಿಮನ್ಯುವಿಗೆ ಎಡ ಮತ್ತು ಬಲ ಭಾಗದಲ್ಲಿ ರೂಪ ಹಾಗೂ ಕಾವೇರಿ ಕುಮ್ಕಿ ಆನೆಗಳು ಸಾಥ್ ನೀಡಿದ್ದು, ಸಂಜೆ 4.42ರಿಂದ 5.16ರ ನಡುವೆ ಶುಭ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ರಾಜವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹಾದೇವಪ್ಪ ಸೇರಿದಂತೆ ಗಣ್ಯರು ಚಾಮುಂಡೇಶ್ವರಿ ತಾಯಿಗೆ ಪುಷ್ಟಾರ್ಚನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗಿದ್ದು, ಪಿರಂಗಿ ದಳವು 21 ಕುಶಾಲ ತೋಪುಗಳನ್ನು ಸಿಡಿಸಿ ಅಧಿಕೃತವಾಗಿ ಮೆರವಣಿಗೆಗೆ ಚಾಲನೆ ನೀಡಿತು. 59 ವರ್ಷದ ಅಭಿಮನ್ಯು 6ನೇ ಬಾರಿ 750 ಕೆಜಿ ತೂಕದ ಅಂಬಾರಿಯನ್ನು ಹೊತ್ತು, ಧನಂಜಯ್ ನಿಶಾನೆ ಆನೆಯಾಗಿ ಹಾಗೂ ಗೋಪಿ ನೌಫತ್ ಆನೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಸುಮಾರು 5 ಕಿ.ಮೀ. ಮೆರವಣಿಗೆ ಮಾರ್ಗದ ಉದ್ದಕ್ಕೂ ಭದ್ರತೆ ಕಾಪಾಡಲು 6,384 ಪೊಲೀಸ್ ಸಿಬ್ಬಂದಿ, ಡ್ರೋನ್ಗಳ ಮೂಲಕ ಕಣ್ಗಾವಲು ಮತ್ತು 45 ಸಾವಿರ ಜನರ ಆಸನ ವ್ಯವಸ್ಥೆ ಕೈಗೊಳ್ಳಲಾಗಿದೆ. ಮೈಸೂರು ನಗರವು ಈ ಅಪರೂಪದ ಸಾಂಸ್ಕೃತಿಕ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಂಡಿದೆ.