ರಾಜ್ಯ
Mysuru Dasara : ಇಂದು ಯುವ ಸಂಭ್ರಮಕ್ಕೆ ಚಾಲನೆ, 14 ಸಾವಿರ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ
ಮೈಸೂರು: ನಾಡಹಬ್ಬ Mysuru Dasara ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯುವ ಯುವ ಸಂಭ್ರಮಕ್ಕೆ ಸೆಪ್ಟೆಂಬರ್ 28ರಂದು ಚಾಲನೆ ದೊರೆಯಲಿದೆ. ಯುವಕ-ಯುವತಿಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಈ ಕಾರ್ಯಕ್ರಮಕ್ಕೆ ಮಾನಸಗಂಗೋತ್ರಿಯ ಬಯಲು ರಂಗಮಂದಿರ ಸಜ್ಜಾಗಿದೆ.
ಇಂದು ಸಂಜೆ 4.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಯುವ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಹಲವು ಸ್ಥಳೀಯ ಜನಪ್ರತಿನಿಧಿಗಳು, ಸಿನಿಮಾ ನಟ-ನಟಿಯರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಪ್ತಮಿ ಗೌಡ, ವಿಜಯ ಪ್ರಕಾಶ್ ಭಾಗಿ
ಪ್ರತಿ ವರ್ಷದಂತೆ ಈ ಬಾರಿಯೂ ಯುವ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರ ಮೆರುಗು ಇರಲಿದೆ. ನಟಿ ಸಪ್ತಮಿ ಗೌಡ ಹಾಗೂ ಖ್ಯಾತ ಗಾಯಕ ವಿಜಯ ಪ್ರಕಾಶ್ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
350ಕ್ಕೂ ಹೆಚ್ಚು ಕಾಲೇಜುಗಳ 14 ಸಾವಿರ ವಿದ್ಯಾರ್ಥಿಗಳು
ಈ ಬಾರಿಯ ಯುವ ಸಂಭ್ರಮದಲ್ಲಿ 350ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 14 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಹಾಡು, ನೃತ್ಯ, ಅಭಿನಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಲಿದ್ದಾರೆ.
ಜಾನಪದ ನೃತ್ಯಗಳು, ಜಿಲ್ಲಾ ವಿಶೇಷ ನೃತ್ಯ ಪ್ರಕಾರಗಳು, ಕನ್ನಡ ಸಿನಿಮಾಗಳ ಆಧಾರಿತ ಆಧುನಿಕ ನೃತ್ಯಗಳು ಸೇರಿದಂತೆ ಸಾಹಿತ್ಯ, ದೇಶಭಕ್ತಿ, ಮಹಿಳಾ ಸಬಲೀಕರಣ, ಪರಿಸರ, ಅರಣ್ಯ, ಆಡಳಿತ, ಸಾಮಾಜಿಕ ನ್ಯಾಯ, ವಿಜ್ಞಾನ-ತಂತ್ರಜ್ಞಾನ, ಇತಿಹಾಸ-ಪುರಾಣ, ಅಂಗವಿಕಲರ ಯಶೋಗಾಥೆ, ಶಿಕ್ಷಣ, ಕ್ರೀಡೆ ಹಾಗೂ ಆರೋಗ್ಯ ಸೇರಿದಂತೆ ವಿವಿಧ ವಿಷಯಾಧಾರಿತ ನೃತ್ಯರೂಪಕಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಲಿದ್ದಾರೆ.
ಪ್ರತಿದಿನ ಸಂಜೆ 4ರಿಂದ ರಾತ್ರಿ 10.30ರವರೆಗೆ ಕಾರ್ಯಕ್ರಮ
ಯುವ ಸಂಭ್ರಮದ ಅಂಗವಾಗಿ ಪ್ರತಿದಿನ ಸಂಜೆ 4ರಿಂದ ರಾತ್ರಿ 10.30ರವರೆಗೆ ವಿದ್ಯಾರ್ಥಿಗಳ ನೃತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಆಯ್ಕೆಯಾಗುವ ತಂಡಗಳಿಗೆ ನವರಾತ್ರಿ ಸಂದರ್ಭದಲ್ಲಿ ನಡೆಯುವ ಯುವ ದಸರಾ ವೇದಿಕೆಯಲ್ಲೂ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೈಸೂರು, ಮಂಡ್ಯ, ಹಾಸನ, ಮಂಗಳೂರು, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಯುವ ಸಂಭ್ರಮದಲ್ಲಿ ಭಾಗವಹಿಸಲಿದ್ದು, ದಸರಾ ಮಹೋತ್ಸವದ ಸಾಂಸ್ಕೃತಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ.