ಬೆಂಗಳೂರು
ಜಿಎಸ್‌ಟಿ ಇಳಿಕೆ ಎಫೆಕ್ಟ್: ನಂದಿನಿ ಉತ್ಪನ್ನಗಳ ಬೆಲೆ ಕಡಿಮೆಯಾಗಲಿದೆ!
ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇಕಡಾ 12 ರಿಂದ ಶೇಕಡಾ 5 ಕ್ಕೆ ಇಳಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ತನ್ನ ನಂದಿನಿ ಬ್ರ್ಯಾಂಡ್‌ನ ಹಲವು ಉತ್ಪನ್ನಗಳ ದರ ಇಳಿಸಲು ಸಿದ್ಧತೆ ನಡೆಸುತ್ತಿದೆ.
ಈ ಕ್ರಮದಿಂದ ಮೊಸರು, ತುಪ್ಪ, ಗುಡ್ ಲೈಫ್ ಹಾಲು, ಬೆಣ್ಣೆ, ಚೀಸ್, ಪನ್ನೀರ್ ಸೇರಿದಂತೆ ಹಲವಾರು ನಂದಿನಿ ಉತ್ಪನ್ನಗಳ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಮೊಸರಿನ ದರ ಲೀಟರ್‌ಗೆ ₹4ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಸೆಪ್ಟೆಂಬರ್ 20ರಂದು ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದ್ದು, ದರ ಇಳಿಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ನಿರ್ಧಾರವಾದರೆ ಸೆ.22ರಿಂದ ಹೊಸ ದರ ಜಾರಿಯಾಗುವ ಸಾಧ್ಯತೆ ಹೆಚ್ಚು.
ಜಿಎಸ್‌ಟಿ ಇಳಿಕೆ ಪಶ್ಚಾತಭೂಮಿ:
2017 ರಲ್ಲಿ ಹಾಲು ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿತ್ತು. 2022 ರಲ್ಲಿ ಈ ತೆರಿಗೆ ಶೇ.12 ಕ್ಕೆ ಏರಿಕೆಯಾಗಿ, ನಂದಿನಿ ಸೇರಿದಂತೆ ವಿವಿಧ ಹಾಲು ಉತ್ಪನ್ನಗಳ ಬೆಲೆ ಎಗ್ಗಿಲ್ಲದೆ ಹೆಚ್ಚಾಗಿತ್ತು. ಇದರಿಂದ ಬಡ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ತೆರಿಗೆಯನ್ನು ಶೇ.5ಕ್ಕೆ ಇಳಿಸಿರುವುದು, ಸಾಮಾನ್ಯ ಗ್ರಾಹಕರಿಗೆ ಆರ್ಥಿಕ ತಣ್ಣನೆ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಪರಿಸರ ಸ್ನೇಹಿ ಪ್ಯಾಕೇಜಿಂಗ್ ಯೋಜನೆ:
ಇದಕ್ಕೆ ಜೊತೆಗೆ, ಬೆಂಗಳೂರು ಹಾಲು ಒಕ್ಕೂಟ ಪರಿಸರ ಸ್ನೇಹಿ ಪರಿವರ್ತನೆಗೆ ಹೆಜ್ಜೆ ಇಟ್ಟಿದ್ದು, ಈ ಬಾರಿ ಹಾಲು ಪ್ಯಾಕೆಜ್‌ಗಳಲ್ಲಿ ಪಾಲಿಥಿನ್ ಕವರ್ ಬದಲು ಪರಿಸರ ಸ್ನೇಹಿ ಕವರ್ ಬಳಕೆಗೆ ಮುಂದಾಗುತ್ತಿದೆ.