ದೇಶ
ಮೀನಿನ ಸುವಾಸನೆ ಬಂದರೆ ಸಾಕು! ಮನೆಗೆ ನುಗ್ಗುವ ನಾನ್-ವೆಜ್ ಪ್ರಿಯ ಕೋತಿ
ಮಂಗಳೂರು, ಜೂನ್ 23: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮಣ್ಣಗುಡ್ಡೆ ಪ್ರದೇಶದಲ್ಲಿ ವಿಚಿತ್ರ ಕೋತಿಯೊಂದು ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ. ಸಾಮಾನ್ಯವಾಗಿ ಹಣ್ಣು, ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಕಸಿದುಕೊಳ್ಳುವ ಮಂಗಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲಿ ಒಂಟಿ ಕೋತಿಯೊಂದು ಮೀನು ಮತ್ತು ಮಾಂಸಾಹಾರದ ಮೇಲೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದು, ಮನೆಗಳಿಗೆ ನುಗ್ಗಿ ನಾನ್-ವೆಜ್ ಆಹಾರ ಕದ್ದು ಪರಾರಿಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಮಣ್ಣಗುಡ್ಡೆಯ ಕಾಂತರಾಜ್ ಲೇನ್ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಈ ಕೋತಿಯ ಕಾಟ ಹೆಚ್ಚಾಗಿದ್ದು, ಸ್ಥಳೀಯರು ಹಲವು ಬಾರಿ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಇದೀಗ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ.
ಸ್ಥಳೀಯರ ಪ್ರಕಾರ, ಮನೆಗಳಲ್ಲಿ ಮೀನು ಅಥವಾ ಮಾಂಸಾಹಾರದ ಅಡುಗೆ ನಡೆಯುತ್ತಿದ್ದರೆ ಅದರ ವಾಸನೆ ಹಿಡಿದು ಕೋತಿ ಮನೆಗಳಿಗೆ ನುಗ್ಗಲು ಯತ್ನಿಸುತ್ತದೆ. ಬಾಗಿಲು ತೆರೆದಿದ್ದರೆ ನೇರವಾಗಿ ಒಳಗೆ ಬಂದು ಆಹಾರ, ಬಟ್ಟೆ ಹಾಗೂ ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತದೆ. ರಸ್ತೆಯ ಎರಡೂ ಬದಿಯ ಮರಗಳಿಂದ ನೇರವಾಗಿ ಮನೆಗಳ ಮೇಲೆ ಜಿಗಿಯುವುದರಿಂದ ಇದನ್ನು ತಡೆಯುವುದು ಕಷ್ಟವಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಈ ಕೋತಿ ಕೆಲವು ಸಾಕು ನಾಯಿಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರೂ, ಅಡ್ಡಿಪಡಿಸಿದ ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆಗಳೂ ವರದಿಯಾಗಿವೆ. ಇತ್ತೀಚೆಗೆ ಸ್ಥಳೀಯ ಮಹಿಳೆಯೊಬ್ಬರ ಮೇಲೂ ದಾಳಿ ನಡೆಸಿದ್ದು, ಚಿಕಿತ್ಸೆಗಾಗಿ ಹಲವು ಇಂಜೆಕ್ಷನ್‌ಗಳನ್ನು ಪಡೆಯಬೇಕಾಯಿತು.
ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಮನೆಗೆ ಮರಳುವಾಗ ಕೋತಿ ಬೆನ್ನಟ್ಟುತ್ತಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಸೆರೆಹಿಡಿಯಲು ಬೋನು ಮತ್ತು ಬಲೆಗಳನ್ನು ಅಳವಡಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.