ದೇಶ
ತಾಲಿಬಾನ್ ಸೇನೆಯ ಪ್ರತಿದಾಳಿ – ಪಾಕಿಸ್ತಾನದ ಮೇಲೆ ಭಾರೀ ಗುಂಡಿನ ದಾಳಿ!
ಕಾಬೂಲ್/ಇಸ್ಲಾಮಾಬಾದ್: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಮತ್ತೆ ಭಾರೀ ಸಂಘರ್ಷ ಭುಗಿಲೆದ್ದಿದೆ. ತಾಲಿಬಾನ್ ಪಡೆಗಳು ಪಾಕಿಸ್ತಾನ ಸೇನೆಯ ಮೇಲೆ ಸಶಸ್ತ್ರ ಪ್ರತೀಕಾರ ಆರಂಭಿಸಿದ್ದು, ಎರಡೂ ರಾಷ್ಟ್ರಗಳ ನಡುವಿನ ತೀವ್ರ ಉದ್ವಿಗ್ನತೆ ಮತ್ತೆ ಹೆಚ್ಚಿದೆ.
ಅಫ್ಘಾನ್ ರಕ್ಷಣಾ ಸಚಿವಾಲಯವು ಪ್ರಕಟಿಸಿದ ಮಾಹಿತಿಯ ಪ್ರಕಾರ, ಕಾಬೂಲ್‌ನಲ್ಲಿ ಇತ್ತೀಚೆಗೆ ನಡೆದ ಎರಡು ಸ್ಫೋಟಗಳ ಹಿಂದಿದೆ ಪಾಕಿಸ್ತಾನದ ಕೈವಾಡ ಎಂದು ಆರೋಪಿಸಿದೆ. ಪಾಕಿಸ್ತಾನವು ಅಫ್ಘಾನಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ತಾಲಿಬಾನ್ ಗಂಭೀರ ಆರೋಪ ಮಾಡಿದೆ.
ಕಾಬೂಲ್ ಮೇಲೆ ನಡೆದ ಪಾಕಿಸ್ತಾನದ ವಾಯುದಾಳಿಗಳಿಗೆ ಪ್ರತೀಕಾರವಾಗಿ ತಾಲಿಬಾನ್ ಪಡೆಗಳು ಕುನಾರ್, ನಂಗರ್ಹಾರ್, ಪಕ್ತಿಯಾ, ಖೋಸ್ಟ್ ಹಾಗೂ ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳ ವಿರುದ್ಧ ಪ್ರತಿದಾಳಿ ನಡೆಸಿವೆ. “ನಾವು ಪಾಕ್ ಸೇನೆಯ ವಿರುದ್ಧ ಯಶಸ್ವಿಯಾಗಿ ಸೇಡು ತೀರಿಸಿಕೊಂಡಿದ್ದೇವೆ” ಎಂದು ತಾಲಿಬಾನ್ ವಕ್ತಾರ ಎನಾಯತ್ ಖೋವಾರಾಜ್ಮ ತಿಳಿಸಿದ್ದಾರೆ.
ಇದಕ್ಕೂ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನ ಅಧಿಕಾರಿಗಳು, “ಅಫ್ಘಾನ್ ತಾಲಿಬಾನ್ ಆಶ್ರಯ ನೀಡುತ್ತಿದ್ದ ಟಿಟಿಪಿ (Tehrik-i-Taliban Pakistan) 2021 ರಿಂದ ನೂರಾರು ಪಾಕಿಸ್ತಾನ ಸೈನಿಕರನ್ನು ಕೊಂದಿದೆ” ಎಂದು ಆರೋಪಿಸಿದ್ದಾರೆ. ಗಡಿಯುದ್ದಕ್ಕೂ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದ್ದು, ಪಾಕಿಸ್ತಾನ ಪಡೆಗಳು ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದ್ದ ಮೂರು ಅಫ್ಘಾನ್ ಕ್ಯಾಡ್‌ಕಾಪ್ಟರ್‌ಗಳನ್ನು ಹೊಡೆದುರುಳಿಸಿರುವ ಮಾಹಿತಿ ದೊರಕಿದೆ.
ಈ ಘಟನೆಗಳ ಬೆನ್ನಲ್ಲೇ ತಾಲಿಬಾನ್ “ಪಾಕ್ ಮತ್ತೆ ಅಫ್ಘಾನ್ ಭೂಮಿಯನ್ನು ಉಲ್ಲಂಘಿಸಿದರೆ ತೀವ್ರ ಪ್ರತೀಕಾರ ನೀಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದೆ.