ಬಿಎಲ್‌ಎ ದಾಳಿಗೆ ಪಾಕ್ ಸೇನೆ ತತ್ತರ: ಖವಾಜಾ ಆಸೀಫ್ | Hosa Suddi

ದೇಶ

ಬಿಎಲ್‌ಎ ದಾಳಿಗೆ ಪಾಕ್ ಸೇನೆ ತತ್ತರ: ಖವಾಜಾ ಆಸೀಫ್

Published

on

ಇಸ್ಲಾಮಾಬಾದ್: ಪಾಕಿಸ್ತಾನ ಸೇನೆ ಮತ್ತು ಬಲೂಚಿಸ್ತಾನ ಲಿಬರೇಷನ್ ಆರ್ಮಿ (Balochistan Liberation Army – BLA) ನಡುವಿನ ಸಂಘರ್ಷ ತೀವ್ರ ಹಂತ ತಲುಪಿದ್ದು, ಬಲೂಚಿಸ್ತಾನದಲ್ಲಿ ನಿರಂತರ ಹಿಂಸಾಚಾರ ಸಾಮಾನ್ಯ ಸಂಗತಿಯಾಗುತ್ತಿದೆ. ಬಿಎಲ್‌ಎ ನಡೆಸುತ್ತಿರುವ ‘ಆಪರೇಷನ್ ಹೆರೋಫ್ 2.0’ ಕಾರ್ಯಾಚರಣೆಯಿಂದ ಪಾಕಿಸ್ತಾನ ಸೇನೆ ಅಕ್ಷರಶಃ ತತ್ತರಿಸಿದೆ.

ಈ ಮಾತನ್ನು ಭಾರತವಾಗಲಿ ಅಥವಾ ಬಲೂಚಿಸ್ತಾನ ಬೆಂಬಲಿಗರಾಗಲಿ ಹೇಳಿಲ್ಲ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸೀಫ್ ಖುದ್ದಾಗಿ ಪಾಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡುತ್ತಾ, ಬಿಎಲ್‌ಎ ದಾಳಿಗಳು ಪಾಕಿಸ್ತಾನ ಸೇನೆಗೆ ಭಾರೀ ಹೊಡೆತ ನೀಡಿವೆ ಎಂದು ಒಪ್ಪಿಕೊಂಡಿದ್ದಾರೆ. ಅವರ ಹೇಳಿಕೆ ಪಾಕಿಸ್ತಾನ ಸೇನೆಯ ನೈಜ ಸ್ಥಿತಿಯನ್ನು ಬಹಿರಂಗಪಡಿಸಿದೆ.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಖವಾಜಾ ಆಸೀಫ್, “ಬಲೂಚಿಸ್ತಾನ ಪ್ರಾಂತ್ಯ ಗಾತ್ರದಲ್ಲಿ ಅತ್ಯಂತ ದೊಡ್ಡದು. ಈ ವಿಶಾಲ ಪ್ರದೇಶದಲ್ಲಿ ಬಲೂಚ್ ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸಲು ಪಾಕಿಸ್ತಾನಿ ಭದ್ರತಾ ಪಡೆಗಳು ಅಸಹಾಯಕ ಸ್ಥಿತಿಗೆ ತಲುಪಿವೆ. ಬಿಎಲ್‌ಎ ನಡೆಸುತ್ತಿರುವ ಅನಿರೀಕ್ಷಿತ ದಾಳಿಗಳು ಪಾಕಿಸ್ತಾನ ಸೇನೆಯ ನೈತಿಕ ಮಟ್ಟವನ್ನು ಕುಸಿಯುವಂತೆ ಮಾಡಿವೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ ಸೇನೆ ಬಲೂಚಿಸ್ತಾನದಲ್ಲಿ ಆಪರೇಷನ್ ಹೆರೋಫ್ 2.0 ವಿರುದ್ಧ ಭಾರೀ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ರಾಜಧಾನಿ ಕ್ವೆಟ್ಟಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಕಾಳಗ ನಡೆದಿದ್ದು, ಈ ವೇಳೆ 145 ಬಲೂಚ್ ಬಂಡುಕೋರರನ್ನು ಹತ್ಯೆಗೈದಿರುವುದಾಗಿ ಪಾಕ್ ಸೇನೆ ಹೇಳಿಕೊಂಡಿದೆ. ಆದರೆ ಇದರ ನಡುವೆಯೇ, ಬಿಎಲ್‌ಎ ಪಾಕಿಸ್ತಾನ ಸೇನಾ ನೆಲೆಗಳ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

“ಬಲೂಚಿಸ್ತಾನವು ದೇಶದ ಒಟ್ಟು ಭೂಭಾಗದ ಶೇ.40ರಷ್ಟು ವಿಸ್ತೀರ್ಣ ಹೊಂದಿರುವ, ಕಡಿಮೆ ಜನಸಂಖ್ಯೆಯ ಪ್ರದೇಶ. ಇಷ್ಟು ದೊಡ್ಡ ಭೌಗೋಳಿಕ ಪ್ರದೇಶದಲ್ಲಿ ಕಾವಲು ಕಾಯುವುದು ಹಾಗೂ ನಿರಂತರ ಗಸ್ತು ತಿರುಗುವುದು ನಮ್ಮ ಸೈನಿಕರಿಗೆ ದೈಹಿಕ ಮತ್ತು ಮಾನಸಿಕವಾಗಿ ದೊಡ್ಡ ಸವಾಲಾಗಿದೆ” ಎಂದು ಖವಾಜಾ ಆಸೀಫ್ ಒಪ್ಪಿಕೊಂಡಿದ್ದಾರೆ.

ಬಿಎಲ್‌ಎ ಮಹಿಳಾ ಫಿದಾಯಿನ್ ದಾಳಿಗಳು ಪಾಕಿಸ್ತಾನ ಸೇನೆ ಹಾಗೂ ಸರ್ಕಾರದ ನಿದ್ದೆಗೆಡೆಸಿದ್ದು, ಇದುವರೆಗೆ ನಡೆದ ದಾಳಿಗಳಲ್ಲಿ 200ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆಯೂ ಸುಮಾರು 177ಕ್ಕೂ ಹೆಚ್ಚು ಬಲೂಚ್ ಬಂಡುಕೋರರನ್ನು ಹತ್ಯೆಗೈದಿದೆ ಎಂದು ತಿಳಿಸಿದೆ.

ಆದರೂ, ಬಲೂಚ್ ಬಂಡುಕೋರರೊಂದಿಗೆ ಮಾತುಕತೆ ನಡೆಸುವ ಯಾವುದೇ ಸಾಧ್ಯತೆಯನ್ನು ಪಾಕಿಸ್ತಾನ ಸರ್ಕಾರ ತಳ್ಳಿ ಹಾಕಿದೆ. “ಮಹಿಳೆಯರು, ಮಕ್ಕಳು ಮತ್ತು ನಿರಪರಾಧ ನಾಗರಿಕರನ್ನು ಕೊಲ್ಲುವ ಭಯೋತ್ಪಾದಕರೊಂದಿಗೆ ನಾವು ಮಾತುಕತೆ ನಡೆಸುವುದಿಲ್ಲ” ಎಂದು ಖವಾಜಾ ಆಸೀಫ್ ಸ್ಪಷ್ಟಪಡಿಸಿದ್ದಾರೆ.

Trending

Exit mobile version