ದೇಶ
‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಪ್ರಕರಣಗಳು: 3 ವರ್ಷಗಳಲ್ಲಿ 17 ಕೇಸ್, ಒಂದಕ್ಕೂ ಶಿಕ್ಷೆ ಇಲ್ಲ – ಗೃಹ ಇಲಾಖೆ ಅಂಕಿಅಂಶ ಬಹಿರಂಗ
ಬೆಂಗಳೂರು: ರಾಜ್ಯದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಹಾಗೂ ‘ಬಾಂಗ್ಲಾದೇಶ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಇದುವರೆಗೂ ಒಂದೇ ಒಂದು ಕೇಸ್ನಲ್ಲೂ ಶಿಕ್ಷೆ ಆಗಿಲ್ಲ ಎಂಬ ಅಂಶ ಬಹಿರಂಗವಾಗಿದೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣಗಳು ಬಹುತೇಕ ತನಿಖೆ ಹಂತದಲ್ಲೇ ನಿಂತಿವೆ ಎಂದು ಗೃಹ ಇಲಾಖೆಯ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ, 2023ರಿಂದ 2026ರವರೆಗೆ ರಾಜ್ಯದಲ್ಲಿ ಒಟ್ಟು 17 ಪಾಕಿಸ್ತಾನ ಜಿಂದಾಬಾದ್ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಈ ಎಲ್ಲಾ ಪ್ರಕರಣಗಳಲ್ಲೂ ಇನ್ನೂ ಶಿಕ್ಷೆ ವಿಧಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಇಲಾಖೆಯ ಮಾಹಿತಿ ಪ್ರಕಾರ, ಕೆಲವು ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿದ್ದರೆ, ಇನ್ನೂ ಕೆಲವು ತನಿಖೆಯಲ್ಲಿವೆ. ಕೆಲವು ಪ್ರಕರಣಗಳಲ್ಲಿ ಬಿ-ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. ಇದರಿಂದಾಗಿ ದೇಶದ್ರೋಹದಂತಹ ಗಂಭೀರ ಆರೋಪಗಳ ಮೇಲೂ ಕ್ರಮ ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಅಂಕಿಅಂಶಗಳ ಪ್ರಕಾರ,
2023ರಲ್ಲಿ 3 ಪ್ರಕರಣಗಳು,
2024ರಲ್ಲಿ 8 ಪ್ರಕರಣಗಳು,
2025ರಲ್ಲಿ 6 ಪ್ರಕರಣಗಳು ದಾಖಲಾಗಿದ್ದು, ಒಟ್ಟು 17 ಕೇಸ್ಗಳು ಇವೆ.
ಇದಲ್ಲದೆ 2026ರಲ್ಲಿ ‘ಬಾಂಗ್ಲಾದೇಶ ಜಿಂದಾಬಾದ್’ ಘೋಷಣೆಗೆ ಸಂಬಂಧಿಸಿದಂತೆ 1 ಪ್ರಕರಣ ದಾಖಲಾಗಿದೆ.
ಬೆಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆ ರಾಜ್ಯದಲ್ಲಿ ದೇಶದ್ರೋಹ ಪ್ರಕರಣಗಳ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ವರ್ಷವಾರು ಕೇಸ್ ವಿವರ
ಪಾಕಿಸ್ತಾನ ಜಿಂದಾಬಾದ್ ಪ್ರಕರಣಗಳು
- 2023: 3 ಕೇಸ್
- 2024: 8 ಕೇಸ್
- 2025: 6 ಕೇಸ್
ಒಟ್ಟು: 17 ಕೇಸ್
ಬಾಂಗ್ಲಾದೇಶ ಜಿಂದಾಬಾದ್
- 2026: 1 ಕೇಸ್
ಯಾವ ಕೇಸ್ ಯಾವ ಹಂತದಲ್ಲಿ?
ಬೆಂಗಳೂರು
- 2024 ವಿಧಾನಸೌಧ – ತನಿಖೆಯಲ್ಲಿದೆ
- 2025 ವೈಟ್ಫೀಲ್ಡ್ – ತನಿಖೆಯಲ್ಲಿದೆ
- 2026 ಹೆಬ್ಬಗೋಡಿ – ತನಿಖೆಯಲ್ಲಿದೆ
ಬೆಳಗಾವಿ
- 2023 ತಿಲವಾಡಿ – ಆರೋಪಿ ಪತ್ತೆಯಾಗಬೇಕಿದೆ
- 2024 ಮಾರ್ಕೆಟ್ – ಆರೋಪಿತನಿಗೆ ಸಮನ್ಸ್ ಜಾರಿ
ಮೈಸೂರು
- 2025 ಹುಣಸೂರು – ತನಿಖೆಯಲ್ಲಿದೆ
ಶಿವಮೊಗ್ಗ
- 2025 ಹಳೆನಗರ ಠಾಣೆ – ಬಿ ರಿಪೋರ್ಟ್ ಸಲ್ಲಿಕೆ
ಚಿಕ್ಕಮಗಳೂರು
- 2024 ಕೊಪ್ಪ – ಬಿ ರಿಪೋರ್ಟ್ ಸಲ್ಲಿಕೆ
- 2025 ತರೀಕೆರೆ – ತನಿಖೆಯಲ್ಲಿದೆ