“ಯುವಕರಿಗೆ ಗೀತೆಯೇ ಮಾರ್ಗ” — ಪವನ್ ಕಲ್ಯಾಣ್ ಉಡುಪಿಯಲ್ಲಿ ಸಂದೇಶ | Hosa Suddi

ದೇಶ

“ಯುವಕರಿಗೆ ಗೀತೆಯೇ ಮಾರ್ಗ” — ಪವನ್ ಕಲ್ಯಾಣ್ ಉಡುಪಿಯಲ್ಲಿ ಸಂದೇಶ

Published

on

ಉಡುಪಿ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಸೋಮವಾರ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನಡೆದ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಭಕ್ತರ ಗಮನ ಸೆಳೆದರು.

ಕಾರ್ಯಕ್ರಮಕ್ಕೂ ಮುನ್ನ ರಥ ಬೀದಿಗೆ ಆಗಮಿಸಿದ ಪವನ್ ಕಲ್ಯಾಣ್ ಕನಕನ ಗುಡಿಗೆ ಮಾಲಾರ್ಪಣೆ ಮಾಡಿ, ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಅನಂತೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಪರ್ಯಾಯ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ನವಗ್ರಹ ಕಿಂಡಿಯ ಮೂಲಕ ದರ್ಶನ ಮಾಡಿಸಿ ಪ್ರಸಾದ ನೀಡಿ ಗೌರವಿಸಿದರು.

ಸಂಜೆಯ ರಾಜಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಮಠದ ವತಿಯಿಂದ ಅಭಿನವ ಶ್ರೀ ಕೃಷ್ಣದೇವರಾಯ ಪ್ರಶಸ್ತಿಯನ್ನು ಪವನ್ ಕಲ್ಯಾಣ್ ಅವರಿಗೆ ಪ್ರದಾನ ಮಾಡಲಾಯಿತು. “ಧರ್ಮರಕ್ಷಣೆಗೆ ಮಹತ್ವದ ಕೆಲಸ ಮಾಡುತ್ತಿರುವುದರಿಂದ ಈ ಗೌರವ” ಎಂದು ಸ್ವಾಮೀಜಿಗಳು ಹೇಳಿದರು.

ಯುವ ಜನರ ಒತ್ತಡ, ಸಮಕಾಲೀನ ಸಮಸ್ಯೆಗಳ ಪರಿಹಾರವಾಗಿ ಭಗವದ್ಗೀತೆಯೇ ಮಾರ್ಗ ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟರು. “ಗೋವು ರಕ್ಷಣೆಗೆ ಯಾರನ್ನೂ ದೂರುವ ಅಗತ್ಯವಿಲ್ಲ. ಪ್ರತಿಯೊಂದು ಕುಟುಂಬವೂ ಒಂದು ಗೋವನ್ನು ಸಾಕಿದರೆ ಸಾಕು” ಎಂದರು.

ರಾಜಕೀಯ ಬಗ್ಗೆ ಮಾತನಾಡಿದ ಅವರು, “ಸೋಲು-ಗೆಲುವು ನನಗೆ ದೊಡ್ಡ ವಿಷಯವಲ್ಲ. ಭಗವದ್ಗೀತೆ ನಿಷ್ಕಾಮ ಕರ್ಮವನ್ನು ಬೋಧಿಸಿದೆ. ಯುದ್ಧಕಾಲಕ್ಕೂ ಗೀತೆಯೇ ಪರಿಹಾರ. ಅದರಲ್ಲೇ ವಿಶ್ವಶಾಂತಿಯ ಮಾರ್ಗ ಇದೆ” ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಪವನ್ ಕಲ್ಯಾಣ್, “ರಷ್ಯಾ ಅಧ್ಯಕ್ಷ ಪುಟಿನ್‌ರಿಗೆ ಪ್ರಧಾನಿ ಮೋದಿ ಗೀತೆಯನ್ನು ಉಡುಗೊರೆ ನೀಡಿರುವುದು ಅದಕ್ಕಾಗಿ” ಎಂದು ಹೇಳಿದರು.

ಇದರೊಂದಿಗೆ ಡಿಸೆಂಬರ್ 13ರಂದು ನಡೆಯಲಿರುವ ವಿಶ್ವಶಾಂತಿ ಸಮಾವೇಶಕ್ಕೂ ವೇದಿಕೆ ಸಿದ್ದವಾಗಿದೆ. ಪರ್ಯಾಯ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ, “ಅಮೆರಿಕದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ವಿಲಿಯಂ ವಿಂಡ್ಲೆ, ಸದ್ಗುರು ಶ್ರೀಮಧುಸೂದನ ಸಾಯಿ, ಆಂಧ್ರ ರಾಜ್ಯಪಾಲ ನ್ಯಾ. ಅಬ್ದುಲ್ ನಝೀರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.”

ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದು, ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ ಅವರನ್ನು ಸನ್ಮಾನಿಸಲಾಗುವುದಾಗಿದೆ.

Trending

Exit mobile version