ದೇಶ
ಕುಡಿಯುವವರ ನೋವಿನ ಕಥೆ ಹೇಳುವ ‘ಪಿಯೊಟ್’ – ಹೊಸ ಪ್ರತಿಭೆಗಳ ಸಿನಿಮಾ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಚಿತ್ರ ಡಿಸೆಂಬರ್ 11ರಂದು ಭರ್ಜರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಇದೇ ವೇಳೆ ಹೊಸ ಪ್ರತಿಭೆಗಳ ತಂಡದಿಂದ ಬಂದಿರುವ ‘ಪಿಯೊಟ್’ ಎಂಬ ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲಿದೆ. ಕುಡಿತದ ಅಡಿಕ್ಷನ್, ಅದರಿಂದಾಗುವ ಮಾನಸಿಕ-ಸಾಮಾಜಿಕ ಸಮಸ್ಯೆಗಳು ಮತ್ತು ಕುಡಿತ ಬಿಡುವ ಹೋರಾಟದ ಬಗ್ಗೆ ಬಲವಾದ ಸಂದೇಶವನ್ನು ಹೊತ್ತು ಈ ಸಿನಿಮಾ ಬರುತ್ತಿದೆ.
‘ಪಿಯೊಟ್’ ಚಿತ್ರದ ತಂಡ ಮಾಧ್ಯಮವನ್ನು ಭೇಟಿ ಮಾಡಿ ಚಿತ್ರದ ಕುರಿತ ವಿವರ ಹಂಚಿಕೊಂಡಿದೆ. “ಕುಡಿಯುವವರನ್ನು ಪಿಯೊಟ್ ಎಂದು ಲೇಬಲ್ ಮಾಡುವುದು ಸರಿಯಲ್ಲ. ಅವರ ನೋವುಗಳನ್ನು, ಅವರ ಕಥೆಯನ್ನು ಅರ್ಥ ಮಾಡಿಕೊಳ್ಳಲು ಈ ಸಿನಿಮಾ ಪ್ರಯತ್ನಿಸುತ್ತದೆ” ಎಂದು ನಿರ್ದೇಶಕ ಕಾರ್ತಿಕ್ ರಾಜ್ ಹೇಳಿದ್ದಾರೆ.
ಚಿತ್ರದಲ್ಲಿ ನಟ ಲಿಖಿತ್ ನಾಯಕನಾಗಿ ಕಾಣಿಸಿಕೊಂಡಿದ್ದು, ಜೋಡಿಯಾಗಿ ಅಶ್ವಿನಿ ಚಾವರೆ ನಟಿಸಿದ್ದಾರೆ. ಈ ಹಿಂದೆ ಮರಾಠಿ, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಮಿಂಚಿರುವ ಅಶ್ವಿನಿ, ಈಗ ಕನ್ನಡದಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ. “ಸಿನಿಮಾಗೆ ಯಾವುದೇ ಬ್ಲ್ಯಾಕ್ ಮಾರ್ಕ್ ಆಗಬಾರದು ಎಂಬ ಕಾರಣಕ್ಕೆ ತುಂಬಾ ಶ್ರಮ ಪಟ್ಟಿದ್ದೇನೆ. ನಾನು ಜೀವನದಲ್ಲಿ ಆಲ್ಕೋಹಾಲ್ ಮುಟ್ಟಿಲ್ಲ” ಎಂದು ನಟ ಲಿಖಿತ್ ಹೇಳಿದ್ದಾರೆ.
ಗ್ರೇಸ್ ಫಿಲ್ಮ್ಸ್ ನಿರ್ಮಿಸಿರುವ ಚಿತ್ರಕ್ಕೆ ಲಹರಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. “ಕುಡಿತ ಬಿಡಿಸುವ ಕೇಂದ್ರದಲ್ಲಿ ಜನ ಎದುರಿಸುವ ಕಷ್ಟಗಳನ್ನು ಸಿನಿಮಾ ಚೆನ್ನಾಗಿ ತೋರಿಸಿದೆ. ಸಂದೇಶ ಬಹಳ ಪ್ರಬಲವಾಗಿದೆ” ಎಂದು ಲಹರಿ ವೇಲು ಪ್ರಶಂಸಿಸಿದ್ದಾರೆ.
ಅದೇ ‘ದಿ ಡೆವಿಲ್’ ಚಿತ್ರದ ರಿಲೀಸ್ ಹವಾ ನಡುವೆ ‘ಪಿಯೊಟ್’ ತಂಡ ಮಾಧ್ಯಮದ ಮೂಲಕ ತಮ್ಮ ಸಿನಿಮಾಗೂ ಬೆಂಬಲ ನೀಡುವಂತೆ ಮನವಿ ಮಾಡಿದೆ.