ಬೆಂಗಳೂರು
ಇ-ಸ್ವತ್ತು ರೂಪು ಪಡೆಯುತ್ತಿದೆ: ಗ್ರಾಮ ಪಂಚಾಯತ್ ಆಸ್ತಿ ನೋಂದಣಿಗೆ ಹೊಸ ನಿಯಮಗಳು
ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಈ ಕುರಿತು ರೂಪಿಸಲಾಗುತ್ತಿರುವ ಕರಡು ನಿಯಮಾವಳಿಗಳನ್ನು ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕೆಲವು ಸೂಕ್ತ ಬದಲಾವಣೆಗಳನ್ನು ಸೂಚಿಸಿ, ಒಂದು ವಾರದೊಳಗೆ ಕರಡು ನಿಯಮಗಳನ್ನು ಪ್ರಕಟಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಕಾಸ ಸೌಧದ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತೆರಿಗೆ ದರ ಹಾಗೂ ಫೀಜು ವಿಧಿಸುವ ವಿಧಾನ, ಕಟ್ಟಡ ಹಾಗೂ ಭೂಮಿಯ ತೆರಿಗೆ ನಿರ್ಧಾರ, ನಮೂನೆ 11-ಎ ನಿರ್ವಹಣೆ, ಹೊಸ ಆಸ್ತಿಗಳ ಸೇರ್ಪಡೆ, ಮೇಲ್ಮನವಿ ಪ್ರಕ್ರಿಯೆ, ದಂಡನೆ, ಜಫ್ತಿ ಹಾಗೂ ಮಾರಾಟದ ಕ್ರಮ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿದರು.
ಈ ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುನೀಶ್ ಮುದ್ಗಲ್, ಪಂಚಾಯತ್ ರಾಜ್ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್, ವಿಭಾಗ ಕಾರ್ಯದರ್ಶಿ ರಣದೀಪ್, ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯು ಇ-ಸ್ವತ್ತು ತಂತ್ರಾಂಶದ ಪರಿಣಾಮಕಾರಿ ಜಾರಿಗೆ ದಿಕ್ಕು ನೀಡುವಂತಾಗಿತ್ತು.
ವಿಧಾನಸಭೆ ಅಧಿವೇಶನ ಸಮಯದಲ್ಲೂ ಈ ಬಗ್ಗೆ ಪ್ರಸ್ತಾಪವಾಗಿದ್ದು, ಮುಂದಿನ ಒಂದೂವರೆ ತಿಂಗಳೊಳಗೆ ನಮೂನೆ 11-ಬಿ ಖಾತೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಈಗಾಗಲೇ 29 ಆಕ್ಷೇಪಣೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ ಅಂತಿಮ ನಿಯಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇನ್ನು ಇ-ಸ್ವತ್ತು ತಂತ್ರಾಂಶದಲ್ಲಿ ದೋಷಗಳಿದ್ದಲ್ಲಿ, ಅದನ್ನು ದಿಶಾಂಕ ಆ್ಯಪ್ ಮುಖಾಂತರ ಗುರುತಿಸಿ ಸರಿಪಡಿಸಲಾಗುವುದು ಎಂಬ ಭರವಸೆಯೂ ಸಚಿವರು ನೀಡಿದ್ದಾರೆ.