ದೇಶ
ಜಮೀರ್ ಬಗ್ಗೆ ಅಶೋಕ್ ಟಿಪ್ಪಣಿ: ವಿಧಾನಸಭೆಯಲ್ಲಿ ನಗೆಗಡಲಾದ ಕ್ಷಣ
ಬೆಂಗಳೂರು: ವಿಧಾನಸಭೆಯಲ್ಲಿ ಮೈಸೂರು ಸಿಲ್ಕ್ ಹಾಗೂ ಕೆಎಸ್‌ಐಸಿ ವಿಚಾರವಾಗಿ ನಡೆದ ಚರ್ಚೆ ವೇಳೆ ವಿಪಕ್ಷ ನಾಯಕ R. Ashoka ಸಚಿವ Zameer Ahmed Khan ಅವರನ್ನು ಕಿಚಾಯಿಸಿದ ಘಟನೆ ಗಮನ ಸೆಳೆಯಿತು.
ಸೋಮವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿ Karnataka Silk Industries Corporation (ಕೆಎಸ್‌ಐಸಿ) ಸಂಸ್ಥೆಯನ್ನು ಮುಚ್ಚಲಾಗುತ್ತಿದೆ ಎಂಬ ವಿಚಾರವಾಗಿ ಚರ್ಚೆ ನಡೆಯಿತು. ಈ ವೇಳೆ ಬಿಜೆಪಿ ಶಾಸಕ Srivatsa T S, ಕಳೆದ ಮೂರು ವರ್ಷಗಳಲ್ಲಿ ಎಷ್ಟು ಮೈಸೂರು ಸಿಲ್ಕ್ ಸೀರೆಗಳು ತಯಾರಾಗಿವೆ, ಎಷ್ಟು ಮಾರಾಟವಾಗಿವೆ ಹಾಗೂ ಸಂಸ್ಥೆಗೆ ಎಷ್ಟು ಲಾಭವಾಗಿದೆ ಎಂಬ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳಿದರು. ಜೊತೆಗೆ ಬೇಡಿಕೆಯನ್ನು ಪೂರೈಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ K. Venkatesh, “ಮೈಸೂರು ಸಿಲ್ಕ್ ಸೀರೆಗಳಿಗೆ ಜನರು ಕ್ಯೂನಲ್ಲಿ ನಿಂತು ಖರೀದಿ ಮಾಡುತ್ತಾರೆ. ಸೆಕೆಂಡ್ ಸೇಲ್ ವೇಳೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಆನ್‌ಲೈನ್‌ನಲ್ಲೂ ಸಾಕಷ್ಟು ಬೇಡಿಕೆ ಇದೆ. ಆದರೆ ಸ್ಥಳೀಯರಿಗೆ ಹೆಚ್ಚಿನ ಸೀರೆ ದೊರಕುವಂತೆ ಮಾಡುವ ಉದ್ದೇಶದಿಂದ ಆನ್‌ಲೈನ್ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ ಯೋಚನೆ ಇದೆ” ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ವಿಪಕ್ಷ ನಾಯಕ ಆರ್ ಅಶೋಕ್, “ಸಚಿವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಮೈಸೂರು ಸಿಲ್ಕ್ ಸಿಬ್ಬಂದಿ ಕೇವಲ ಮೂರು ಸಾವಿರ ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ 96 ಕೋಟಿ ಲಾಭ ಮಾಡಿದೆ. ಇಷ್ಟು ಲಾಭ ತರುವ ಸಂಸ್ಥೆಯನ್ನು ಮುಚ್ಚಲು ಹೊರಟಿದ್ದಾರೆ. ಅದನ್ನು ಅಭಿವೃದ್ಧಿ ಮಾಡಬೇಕೇ ಹೊರತು ಮುಚ್ಚಬಾರದು” ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ “90 ಕೋಟಿ ಲಾಭ ತರುವ ಸಂಸ್ಥೆಯನ್ನು ಮುಚ್ಚಲು ಯಾಕೆ ಮುಂದಾಗಿದ್ದಾರೆ? ಇದರಲ್ಲಿ ಯಾವುದಾದರೂ ಬೇರೆ ಲಾಬಿ ಇದೆಯೇ? ಚೀನಾದಿಂದ ಸಿಲ್ಕ್ ಖರೀದಿಸುವ ಉದ್ದೇಶ ಇದೆಯೇ?” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ನಾನು ಜಂಬ ಕೊಚ್ಚಿಲ್ಲ. ನಮ್ಮ ಇಲಾಖೆಯ ವಿಚಾರಗಳನ್ನು ಮಾತ್ರ ಹೇಳಿದ್ದೇನೆ. ಜಮೀನು ಪರಭಾರೆಗೆ ಅವಕಾಶ ನೀಡಿಲ್ಲ. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಸಮಸ್ಯೆ ಉಂಟಾಗಿದೆ. ಜಾಗ ಕೈಬಿಡುವ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಮಧ್ಯಪ್ರವೇಶಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದೇ ಮಟ್ಟದ ವೇತನ ನೀಡಲಾಗುತ್ತಿತ್ತು ಎಂದು ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಆರ್ ಅಶೋಕ್, “ಜಮೀರ್ ಅಹ್ಮದ್ ಖಾನ್ ಅವರು ಫೈವ್ ಸ್ಟಾರ್ ಹೋಟೆಲ್‌ಗೆ ಹೋದಾಗ ಮೂರು ಸಾವಿರ ರೂ. ಟಿಪ್ಸ್ ಕೊಡ್ತಾರೆ” ಎಂದು ಕಿಚಾಯಿಸಿದರು. ಈ ಮಾತು ವಿಧಾನಸಭೆಯಲ್ಲಿ ಕ್ಷಣಕಾಲ ನಗೆ ತರಿಸಿತು.