ದೇಶ
ರಾಹುಲ್ ಗಾಂಧಿ ಫ್ರೀಡಂ ಪಾರ್ಕ್‌ನಲ್ಲಿ ಗುಡುಗು – ಮತಗಳ್ಳತನ ಆರೋಪ, ಚುನಾವಣಾ ಆಯೋಗದ ವೆಬ್‌ಸೈಟ್ ಸ್ಥಗಿತ
ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯಲ್ಲಿ ಐದು ವಿಧಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದರು. ಬಿಜೆಪಿ ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ಸಹಕಾರ ನೀಡಿದೆ ಎಂದು ಅವರು ಕಿಡಿಕರಿದರು.
ಇದರ ಬೆನ್ನಲ್ಲೇ ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ, ಹಾಗೂ ರಾಜಸ್ಥಾನ ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಯಿತು. “ವೋಟ್‌ಚೋರಿ” ಟ್ಯಾಗ್ ಬಳಸಿ ಹಲವಾರು ನೆಟ್ಟಿಗರು ಈ ವಿಷಯದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
“ವಿಳಾಸವೇ ಇಲ್ಲದ 40,000 ಕ್ಕೂ ಹೆಚ್ಚು ಮತದಾರರನ್ನು ಪತ್ತೆ ಹಚ್ಚಿದ್ದೇವೆ. ಇದು ಕೇವಲ ಕರ್ನಾಟಕದ ಸಮಸ್ಯೆಯಲ್ಲ, ಇಡೀ ದೇಶದ ಮಟ್ಟದಲ್ಲಿ ಮತಗಳ್ಳತನವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು. ಅವರು ಚುನಾವಣಾ ಆಯೋಗಕ್ಕೆ 5 ನೇರ ಪ್ರಶ್ನೆಗಳನ್ನೂ ಎಸೆದಿದ್ದಾರೆ.
ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಜಯ ಸಾಧಿಸಿದ್ದರೂ, ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. “ಒಂದು ಕೋಟಿ ಜನ ಹೊಸದಾಗಿ ಮತದಾನ ಮಾಡಿರುವುದು ಚುನಾವಣಾ ಪ್ರಕ್ರಿಯೆಯ ಗಂಭೀರ ಉಲ್ಲಂಘನೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.