“ನನಗೆ ಕ್ಯಾಮರಾ ಕೊಡಿ” – ಜೇಮ್ಸ್ ಕ್ಯಾಮರನ್ ಆಫರ್ | Hosa Suddi

ದೇಶ

“ನನಗೆ ಕ್ಯಾಮರಾ ಕೊಡಿ” – ಜೇಮ್ಸ್ ಕ್ಯಾಮರನ್ ಆಫರ್

Published

on

ಭಾರತದ ಸ್ಟಾರ್ ನಿರ್ದೇಶಕ ಎನ್ನಿಸಿಕೊಂಡಿದ್ದ ಎಸ್‌.ಎಸ್‌. ರಾಜಮೌಳಿ, ‘ಆರ್ಆರ್ಆರ್’ ಸಿನಿಮಾದ ಬಳಿಕ ಈಗ ಪ್ಯಾನ್ ವರ್ಲ್ಡ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ರಾಜಮೌಳಿ ಸಿನಿಮಾ ಎಂದರೆ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು ಕಾದು ನೋಡುವ ಹಂತಕ್ಕೆ ತಲುಪಿದ್ದಾರೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ, ವಿಶ್ವ ಸಿನಿಮಾದ ದಿಗ್ಗಜ ನಿರ್ದೇಶಕರುಗಳೂ ರಾಜಮೌಳಿಯ ನಿರ್ದೇಶನ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ.

ಹಾಲಿವುಡ್‌ನ ಆಸ್ಕರ್ ವಿಜೇತ ನಿರ್ದೇಶಕ ಜೇಮ್ಸ್ ಕ್ಯಾಮರನ್ ಇದೀಗ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಸೆಟ್‌ಗೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ‘ಟೈಟಾನಿಕ್’, ‘ಅವತಾರ್’, ‘ದಿ ಟರ್ಮಿನೇಟರ್’, ‘ಟ್ರು ಲೈಸ್’ ಸೇರಿದಂತೆ ಅನೇಕ ವಿಶ್ವಪ್ರಸಿದ್ಧ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿರುವ ಜೇಮ್ಸ್ ಕ್ಯಾಮರನ್, ‘ಆರ್ಆರ್ಆರ್’ ಸಿನಿಮಾ ವೀಕ್ಷಿಸಿ ರಾಜಮೌಳಿಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. ಹಾಲಿವುಡ್‌ಗೆ ಬಂದು ಸಿನಿಮಾ ಮಾಡುವಂತೆ ಅವರು ರಾಜಮೌಳಿಗೆ ಆಹ್ವಾನವನ್ನೂ ನೀಡಿದ್ದರು.

ಇತ್ತೀಚೆಗೆ ಜೇಮ್ಸ್ ಕ್ಯಾಮರನ್ ಅವರ ಬಹು ನಿರೀಕ್ಷಿತ ಸಿನಿಮಾ ‘ಅವತಾರ್: ಫೈರ್ ಅಂಡ್ ಆಶ್’ ವಿಶೇಷ ಪ್ರದರ್ಶನವನ್ನು ರಾಜಮೌಳಿ ವೀಕ್ಷಿಸಿದರು. ಬಳಿಕ ಇಬ್ಬರ ನಡುವೆ ನಡೆದ ಸಂವಾದದಲ್ಲಿ, ರಾಜಮೌಳಿಯ ಪ್ರತಿಭೆಯನ್ನು ಶ್ಲಾಘಿಸಿದ ಜೇಮ್ಸ್ ಕ್ಯಾಮರನ್, ‘ವಾರಣಾಸಿ’ ಸಿನಿಮಾ ಶೂಟಿಂಗ್ ಸೆಟ್‌ಗೆ ಭೇಟಿ ನೀಡುವ ಆಸೆಯನ್ನು ಬಹಿರಂಗಪಡಿಸಿದರು.

“ನಿಮ್ಮ ಸಿನಿಮಾದ ವಿಶೇಷ ಸೀಕ್ವೆನ್ಸ್ ಶೂಟಿಂಗ್ ಸಮಯದಲ್ಲಿ ನನ್ನನ್ನು ಕರೆಯಿರಿ. ವಿಶೇಷವಾಗಿ ಪ್ರಾಣಿಗಳನ್ನೊಳಗೊಂಡ ದೃಶ್ಯಗಳನ್ನು ನೀವು ಅದ್ಭುತವಾಗಿ ಚಿತ್ರಿಸುತ್ತೀರಿ. ನಿಮ್ಮ ಕೆಲಸದ ಟೆಕ್ನಿಕ್ ಅನ್ನು ಹತ್ತಿರದಿಂದ ನೋಡಲು ಬಯಸುತ್ತೇನೆ” ಎಂದು ಜೇಮ್ಸ್ ಕ್ಯಾಮರನ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜಮೌಳಿ, “ನೀವು ನನ್ನ ಮೇಲಿಟ್ಟಿರುವ ನಂಬಿಕೆ ಹಾಗೂ ಗೌರವಕ್ಕೆ ನಾನು ಋಣಿ. ಖಂಡಿತ ನಿಮ್ಮನ್ನು ಹೈದರಾಬಾದ್‌ಗೆ ಆಹ್ವಾನಿಸುತ್ತೇನೆ” ಎಂದು ಹೇಳಿದರು. ಅಲ್ಲದೆ ಜೇಮ್ಸ್ ಕ್ಯಾಮರನ್, “ನನಗೆ ಒಂದು ಕ್ಯಾಮರಾ ಕೊಡಿ, ನಿಮ್ಮ ಸಿನಿಮಾಗೆ ನಾನು ಕೆಲವು ದೃಶ್ಯಗಳನ್ನು ಚಿತ್ರೀಕರಿಸುತ್ತೇನೆ” ಎಂದಾಗ, ರಾಜಮೌಳಿ ಸಹ ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ‘ವಾರಣಾಸಿ’ ಸಿನಿಮಾದ ಪ್ರಮುಖ ಇವೆಂಟ್‌ಗೆ ಜೇಮ್ಸ್ ಕ್ಯಾಮರನ್ ಅತಿಥಿಯಾಗಿ ಆಗಮಿಸುವ ಸಾಧ್ಯತೆ ಇದೆ.

Trending

Exit mobile version