ಸಿನಿಮಾ
‘Ramayana’ ಚಿತ್ರದ ಮೊದಲ ಹಾಡು ‘ಜೈ ಜೈ ರಾಮ್’ ಬಿಡುಗಡೆ: ಎ.ಆರ್. ರೆಹಮಾನ್ ಸಂಗೀತ
ಸಿನಿಮಾ: ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘Ramayana’ ಚಿತ್ರದ ಮ್ಯೂಸಿಕಲ್ ಜರ್ನಿ ಅಧಿಕೃತವಾಗಿ ಆರಂಭವಾಗಿದೆ. ಚಿತ್ರತಂಡವು ಶ್ರೀರಾಮನ ಭಕ್ತಿ ಮತ್ತು ದೈವಿಕತೆಯನ್ನು ಬಿಂಬಿಸುವ ‘ಜೈ ಜೈ ರಾಮ್’ ಎಂಬ ಮೊದಲ ಗೀತೆಯನ್ನು ಬಿಡುಗಡೆ ಮಾಡಿದೆ. ಆಧ್ಯಾತ್ಮಿಕ ಆರತಿಯ ಭಾವವನ್ನು ಭವ್ಯ ಸಿನಿಮೀಯ ಸಂಗೀತದೊಂದಿಗೆ ಸಂಯೋಜಿಸಿ ಈ ಹಾಡನ್ನು ರೂಪಿಸಲಾಗಿದೆ.
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ‘ಜೈ ಜೈ ರಾಮ್’ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ಕನ್ನಡ ಆವೃತ್ತಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ರಾಘವ್ ಕೌಶಿಕ್ ಮತ್ತು ರಕ್ಷಿತಾ ಸುರೇಶ್ ಹಾಡಿಗೆ ಧ್ವನಿ ನೀಡಿದ್ದಾರೆ. ಶ್ರೀರಾಮನ ಕರುಣೆ, ರಕ್ಷಣೆ, ಧರ್ಮ ಮತ್ತು ಅಭಯವನ್ನು ಹಾಡಿನ ಸಾಹಿತ್ಯದಲ್ಲಿ ಬಿಂಬಿಸಲಾಗಿದೆ.
ಶ್ರೀರಾಮನ ಭಕ್ತಿ ಮತ್ತು ಮೌಲ್ಯಗಳ ಪ್ರತಿಬಿಂಬ
ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ, ಶ್ರೀರಾಮನು ‘ರಾಮಾಯಣ’ದ ಹೃದಯವಾಗಿದ್ದು, ತಲೆಮಾರುಗಳಿಂದ ಜನರ ಜೀವನಕ್ಕೆ ಮಾರ್ಗದರ್ಶನ ನೀಡಿದ್ದಾನೆ ಎಂದು ಹೇಳಿದ್ದಾರೆ. ‘ಜೈ ಜೈ ರಾಮ್’ ಹಾಡು ಶ್ರೀರಾಮನೊಂದಿಗೆ ಭಾರತೀಯರು ಹೊಂದಿರುವ ಭಕ್ತಿ ಮತ್ತು ಭಾವನಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಎ.ಆರ್. ರೆಹಮಾನ್ ಮಾತನಾಡಿ, ಶ್ರೀರಾಮನ ಹೆಸರಿನ ಸರಳ ಹಾಗೂ ಶಕ್ತಿಯುತ ಜಪವೇ ಹಾಡಿನ ಜೀವಾಳವಾಗಿದೆ ಎಂದು ಹೇಳಿದ್ದಾರೆ. ಪ್ರಾರ್ಥನೆಯ ಸಾತ್ವಿಕತೆಯನ್ನು ಉಳಿಸಿಕೊಂಡು ಅದನ್ನು ಭವ್ಯ ಸಿನಿಮೀಯ ಗೀತೆಯಾಗಿ ರೂಪಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ತಾರಾಗಣ
‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಲಂಕೇಶ ರಾವಣನ ಪಾತ್ರದಲ್ಲಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಅಭಿನಯಿಸುತ್ತಿದ್ದಾರೆ.
ಭಾರತೀಯ ಪುರಾಣದ ಪ್ರಮುಖ ಕಥೆಯೊಂದನ್ನು ಭವ್ಯ ದೃಶ್ಯವೈಭವದೊಂದಿಗೆ ತೆರೆಗೆ ತರುವ ಪ್ರಯತ್ನವಾಗಿರುವ ‘ರಾಮಾಯಣ’ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.