ದೇಶ
ರಣ್‌ವೀರ್ ಸಿಂಗ್ ಕ್ಷಮೆ ಕೇಳಬೇಕು: ತುಳುನಾಡ ದೈವಾರಾಧಕರ ಆಗ್ರಹ
ಮಂಗಳೂರು: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ರಣ್‌ವೀರ್ ಸಿಂಗ್ ದೈವಗಳ ಅನುಕರಣೆ ಮಾಡಿದ ಘಟನೆ ತುಳುನಾಡಿನಲ್ಲಿ ಬಿರುಕು ಮೂಡಿಸಿದೆ. ರಣ್‌ವೀರ್ ಸಿಂಗ್ ಅವರು ಚಾವುಂಡಿ ದೈವದ ಅವಾಹನೆಗೆ ಹೋಲುವ ರೀತಿಯಲ್ಲಿ ವೇದಿಕೆ ಮೇಲೆ ಪ್ರದರ್ಶನ ನೀಡಿದ್ದು, ದೈವಾರಾಧಕರು ಇದನ್ನು ತೀವ್ರ ಅವಮಾನವೆಂದು ಪರಿಗಣಿಸಿದ್ದಾರೆ.
ತುಳುನಾಡ ದೈವಾರಾಧನೆ ರಕ್ಷಣಾ ಚಾವಡಿ ಸಂಚಾಲಕ ಕಮಲಾಕ್ಷ ಗಂಧಕಾಡು ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ತುಳುನಾಡಿನ ದೈವಗಳಿಗೆ ನಿರಂತರ ಅವಮಾನ ಮಾಡಲಾಗುತ್ತಿದೆ. ನಮ್ಮ ಭಕ್ತಿಭಾವಕ್ಕೆ ಇದು ದೊಡ್ಡ ನೋವು. ರಣ್‌ವೀರ್ ಸಿಂಗ್ ಅವರು ತಕ್ಷಣ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು,” ಎಂದು ಆಗ್ರಹ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮ ನಡೆಯುವ ವೇಳೆ ನಟ ರಿಷಬ್ ಶೆಟ್ಟಿ ಕೂಡ ಅಕ್ಕಪಕ್ಕದ ಸಾಲಿನಲ್ಲಿ ಕುಳಿತಿದ್ದರು. ರಣ್‌ವೀರ್ ಅವರ ಅನುಕರಣೆಗೆ ರಿಷಬ್ ಶೆಟ್ಟಿ ನಗುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಿಂದ ದೈವಾರಾಧಕರ ಕೋಪ ಮತ್ತಷ್ಟು ಹೆಚ್ಚಾಗಿದೆ. “ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಈ ಘಟನೆಗೆ ವಿರೋಧ ವ್ಯಕ್ತಪಡಿಸದೇ ನಸುಕಿನ ನಗೆ ತೋರಿಸಿದ್ದು ಖಂಡನೀಯ,” ಎಂದು ಕಮಲಾಕ್ಷ ಗಂಧಕಾಡು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಅನೇಕರು ರಿಷಬ್ ಶೆಟ್ಟಿಯನ್ನು ಪ್ರಶ್ನಿಸುತ್ತಿದ್ದಾರೆ: “ತುಳುನಾಡಿನ ಸಂಸ್ಕೃತಿಯನ್ನು ಬಾಲಿವುಡ್ ವೇದಿಕೆಯಲ್ಲಿ ಅವಹೇಳನ ಮಾಡಿದಾಗ ನೀವು ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ?” ಎಂಬ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ.
ಇತ್ತ ರಣ್‌ವೀರ್ ಸಿಂಗ್ ವಿವಾದ ಎದುರಿಸುತ್ತಿರುವಂತೆಯೇ, ದೈವಾರಾಧಕರು ತಮ್ಮ ಭಾವನೆಗಳಿಗೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ. ತುಳುನಾಡಿನ ದೈವ ಸಂಸ್ಕೃತಿ ಮತ್ತು ಅದರ ಪವಿತ್ರತೆಯ ಮೇಲೆ ಹಾಸ್ಯ ಮಾಡುವ ಯಾವುದೇ ಪ್ರಯತ್ನಕ್ಕೆ ಭವಿಷ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ.