ದೇಶ
ಉದಯಪುರದಲ್ಲಿ ರಶ್ಮಿಕಾ–ವಿಜಯ್ ದಾಂಪತ್ಯ: ತೆಲುಗು–ಕೊಡವ ಸಂಪ್ರದಾಯದಲ್ಲಿ ಅದ್ಧೂರಿ ವಿವಾಹ
ಉದಯಪುರ
ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ತಾರೆಯರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಕುಟುಂಬಸ್ಥರ ಸಮ್ಮುಖದಲ್ಲಿ ತೆಲುಗು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈ ವೈವಾಹಿಕ ಸಮಾರಂಭ ಅದ್ಧೂರಿಯಾಗಿ ನಡೆಯಿತು.
ಐಟಿಸಿ ಹೋಟೆಲ್‌ನಲ್ಲಿ ಖಾಸಗಿ ಸಮಾರಂಭ
ಉದಯಪುರದಲ್ಲಿನ ಐಟಿಸಿ ಹೋಟೆಲ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕೆಲವೇ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಹಾಗೂ ಆಪ್ತ ಕುಟುಂಬ ಸದಸ್ಯರು ಸೇರಿದಂತೆ ಸುಮಾರು ನೂರು ಮಂದಿ ಅತಿಥಿಗಳು ಮಾತ್ರ ಭಾಗವಹಿಸಿದ್ದರು. ಖಾಸಗಿ ಹಾಗೂ ಸಂಪ್ರದಾಯಬದ್ಧ ಶೈಲಿಯಲ್ಲಿ ಮದುವೆ ನಡೆಯುವಂತೆ ಜೋಡಿ ವಿಶೇಷ ಕಾಳಜಿ ವಹಿಸಿತ್ತು.
ಬೆಳಗ್ಗೆ ತೆಲುಗು ಸಂಪ್ರದಾಯ, ಸಂಜೆ ಕೊಡವ ಆಚರಣೆ
ವಿಜಯ್ ದೇವರಕೊಂಡ ಅವರು ತೆಲುಗು ಹಿಂದೂ ಸಂಪ್ರದಾಯದಂತೆ ಮದುವೆ ಆಚರಣೆಗಳನ್ನು ನೆರವೇರಿಸಿದ್ದು, ಬೆಳಗ್ಗೆ ವೇಳೆಗೆ ಪ್ರಮುಖ ವಿಧಿವಿಧಾನಗಳು ಮುಕ್ತಾಯಗೊಂಡಿವೆ. ಕೊಡಗು ಮೂಲದವರಾದ ರಶ್ಮಿಕಾ ಮಂದಣ್ಣ ಅವರ ಕುಟುಂಬ ಪರಂಪರೆಯಂತೆ, ಸಂಜೆ ವೇಳೆ ಕೊಡವ ಸಂಪ್ರದಾಯದ ಮದುವೆ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಮಾಹಿತಿ
ಮದುವೆಗೆ ಸಂಬಂಧಿಸಿದಂತೆ ರಶ್ಮಿಕಾ ಮತ್ತು ವಿಜಯ್ ಈಗಾಗಲೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಆಮಂತ್ರಣವನ್ನು ಪ್ರಕಟಿಸಿದ್ದರು. ಈ ಸುದ್ದಿ ಅಭಿಮಾನಿಗಳಲ್ಲಿ ಭಾರೀ ಸಂಭ್ರಮಕ್ಕೆ ಕಾರಣವಾಗಿದೆ.
ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ
ದಕ್ಷಿಣದಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ಜೋಡಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.