ದೇಶ
BJP MP Ravi Kishan ‘ಬ್ರಾಹ್ಮಣ ದೇವತಾ’ ಸಂಭಾಷಣೆ ವೈರಲ್: ಗೋರಖ್‌ಪುರದಲ್ಲಿ ಬಿಜೆಪಿ ನಾಯಕರ ಮುಸುಕಿನ ಗುದ್ದಾಟ!
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾದ ಗೋರಖ್‌ಪುರದಲ್ಲಿ ಭಾರಿ ಮಳೆಯಿಂದ ಉಂಟಾದ ಜಲಾವೃತ ಸಮಸ್ಯೆಯು ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಬಿಜೆಪಿ BJP MP Ravi Kishan ಮತ್ತು ಅದೇ ಪಕ್ಷದ ಕಾರ್ಪೊರೇಟರ್ ವಿಶ್ವಜಿತ್ ತ್ರಿಪಾಠಿ ನಡುವಿನ ವಿವಾದಾತ್ಮಕ ಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ನಗರದಲ್ಲಿ ಮಳೆಯಿಂದಾಗಿ ಉಂಟಾದ ನೀರಿನ ಸಮಸ್ಯೆಯ ಬಗ್ಗೆ ಪ್ರಶ್ನಿಸಿ ಕಾರ್ಪೊರೇಟರ್ ಕರೆ ಮಾಡಿದಾಗ, ರವಿ ಕಿಶನ್ ಅವರು “ಅರೇ ಬ್ರಾಹ್ಮಣ ದೇವತಾ, ಬ್ರಾಹ್ಮಣ ದೇವತಾ,ಸುನಿಯೇ…” ಎಂದು ಸಮಾಧಾನಪಡಿಸಲು ಯತ್ನಿಸಿದರು. ಇದಕ್ಕೆ ಕೋಪಗೊಂಡ ಕಾರ್ಪೊರೇಟರ್, “ಇದು ನನ್ನ ಜಾತಿಯ ವಿಷಯವಲ್ಲ, ನಗರ ಮುಳುಗುತ್ತಿರುವಾಗ ನೀವ ಎಲ್ಲಿದ್ದೀರಿ?” ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಇಬ್ಬರ ನಡುವಿನ ಮಾತಿನ ಚಕಮಕಿ ತೀವ್ರಗೊಂಡಿತು.
ರವಿ ಕಿಶನ್ ಅವರು ವಿರೋಧ ಪಕ್ಷವಾದ ಸಮಾಜವಾದಿ ಪಕ್ಷಕ್ಕೆ ಸೇರಿದ್ದೀರಾ ಎಂದು ವ್ಯಂಗ್ಯವಾಡಿದರೆ, ಕಾರ್ಪೊರೇಟರ್ ಕೂಡ ಪ್ರತಿವ್ಯಂಗ್ಯ ಬೀಸಿದರು. ತಾನು ನೌಕಾ ವಿಹಾರ ರೆಸಾರ್ಟ್‌ನಲ್ಲಿದ್ದು ಪರಿಸ್ಥಿತಿ ಗಮನಿಸುತ್ತಿರುವುದಾಗಿ ಸಂಸದರು ತಿಳಿಸಿದರೂ, ಅಲ್ಲಿಗೆ ತೆರಳಿದಾಗ ಸಂಸದರು ಫೋನ್ ಕಟ್ ಮಾಡಿದ್ದಾಗಿ ಕಾರ್ಪೊರೇಟರ್ ದೂರಿದರು. ಅಲ್ಲದೆ, ಹಿಂದೆ ಗೋರಖ್‌ಪುರವನ್ನು ಸ್ಪೇನ್‌ಗೆ ಹೋಲಿಸಿದ್ದ ರವಿ ಕಿಶನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ತೀವ್ರ ವಾಗ್ದಾಳಿ ನಡೆಸಿದರು. Tarkulahi ಹಾಗೂ Palm Paradise ಬಳಿಯ ಪ್ರವಾಹ ನಿಯಂತ್ರಕಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಮಳೆಯಿಂದ ಉಂಟಾದ ಈ ಪರಿಸ್ಥಿತಿಯನ್ನು ರಾಜಕೀಯಗೊಳಿಸಬಾರದು ಎಂದು ರವಿ ಕಿಶನ್ ತಿರುಗೇಟು ನೀಡಿದರೆ, ಪಕ್ಷದ ಶಿಸ್ತಿನ ಉಲ್ಲಂಘನೆ ಕುರಿತು ಸಮಿತಿ ನಿರ್ಧರಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೇಂದ್ರ ಸಿನ್ಹಾ ತಿಳಿಸಿದ್ದಾರೆ. ಮತ್ತೊಂದೆಡೆ, ಸಮಾಜವಾದಿ ಪಕ್ಷವು ಅತೃಪ್ತ ನಾಯಕರಿಗೆ ನಮ್ಮ ಬಾಗಿಲು ತೆರೆದಿದೆ ಎಂದು ಹೇಳಿದ್ದು, ಈ ವಿವಾದ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.