ದೇಶ
BIG News ರಾಜ್ಯಸಭೆಯಲ್ಲಿ ಬಿರುಗಾಳಿ: ಬಿಜೆಪಿ ಸಂಸದರಿಂದ ವಿವಾದಾತ್ಮಕ ಮಸೂದೆ ಮಂಡನೆ
ನವದೆಹಲಿ: ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತ (Secular) ಮತ್ತು ಸಮಾಜವಾದಿ (Socialist) ಪದಗಳನ್ನು ತೆಗೆದುಹಾಕುವ ಪ್ರಸ್ತಾವದ ಮಸೂದೆಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಭೀಮ್ ಸಿಂಗ್ ಮಂಡಿಸಿರುವುದು ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಭೀಮ್ ಸಿಂಗ್ ಅವರು ಮಂಡಿಸಿದ ಖಾಸಗಿ ಸದಸ್ಯರ ಮಸೂದೆ ಪ್ರಕಾರ, 1949ರಲ್ಲಿ ಅಂಗೀಕರಿಸಿದ ಮೂಲ ಸಂವಿಧಾನದ ಪೀಠಿಕೆಯಲ್ಲಿ ಈ ಪದಗಳು ಇರಲಿಲ್ಲ. ನಂತರ 1976ರಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು 42ನೇ ತಿದ್ದುಪಡಿ ಮೂಲಕ ಜಾತ್ಯಾತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ್ದರು ಎಂದು ಸಿಂಗ್ ಹೇಳಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಹಲವಾರು ಪ್ರತಿಪಕ್ಷ ನಾಯಕರನ್ನು ಜೈಲಿಗೆ ಕಳುಹಿಸಲಾಗಿತ್ತು. ಪ್ರಜಾಪ್ರಭುತ್ವದ ಕಾರ್ಯವ್ಯವಸ್ಥೆ ಕುಗ್ಗಿದ್ದ ಆ ಸಂದರ್ಭದಲ್ಲೇ ಈ ತಿದ್ದುಪಡಿ ಜಾರಿಗೆ ಬಂದಿತೆಂದು ಭೀಮ್ ಸಿಂಗ್ ವಾದಿಸಿದ್ದಾರೆ.
“ಸಂವಿಧಾನವು ತನ್ನ ಮೂಲರೂಪದಲ್ಲೇ ಉಳಿಯಬೇಕು. ತುರ್ತು ಪರಿಸ್ಥಿತಿಯಲ್ಲಿ ಸೇರಿಸಲಾದ ಈ ಎರಡು ಪದಗಳನ್ನು ತಕ್ಷಣ ತೆಗೆದುಹಾಕಬೇಕು” ಎಂದು ಭೀಮ್ ಸಿಂಗ್ ಹೇಳಿದ್ದಾರೆ. ಈ ಮಸೂದೆ ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ರಾಜಕೀಯ ಮಾತುಕತೆಗಳನ್ನು ಮತ್ತಷ್ಟು ಗರಿಗೆದರಿಸಲಿದೆ ಎನ್ನುವುದು ರಾಜಕೀಯ ವಲಯದ ಅಂದಾಜು.