ದೇಶ
ಶತಮಾನೋತ್ಸವ ಆಚರಣೆ: ಕೋಲಾರದಲ್ಲಿ ಗಣವೇಶಧಾರಿಗಳ ಭವ್ಯ ಪಥಸಂಚಲನ
ಕೋಲಾರ: ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ವಿವಾದ ತಣ್ಣಗಾಗುವ ಮುನ್ನವೇ, ಈಗ ಕೋಲಾರದ ಮಾಲೂರಿನಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಪಥಸಂಚಲನ ನಡೆಯುತ್ತಿದೆ. ಇಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆವರೆಗೆ 4 ಕಿಮೀ ಉದ್ದದ ಪಥಸಂಚಲನಕ್ಕೆ ಅನುಮತಿ ನೀಡಲಾಗಿದೆ.
ಸಾವಿರಾರು ಗಣವೇಶಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಲಿದ್ದು, ನಗರದಲ್ಲಿ ಭದ್ರತೆಗಾಗಿ ಸುಮಾರು 250ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ. ಜಿಲ್ಲಾಡಳಿತವು ಆರ್‌ಎಸ್‌ಎಸ್ ಕಚೇರಿ ಸೇರಿ 8 ಸಂಘಟನೆಗಳಿಗೆ ಶಾಂತಿ ಸಭೆಗೆ ಆಗಮಿಸುವಂತೆ ನೋಟಿಸ್ ನೀಡಿದೆ.
ಪಥಸಂಚಲನವು ಮಾಲೂರು ಹೋಂಡಾ ಸ್ಟೇಡಿಯಂನಿಂದ ಪ್ರಾರಂಭವಾಗಿ ಬಿಇಓ ಆಫೀಸ್ ರಸ್ತೆ, ಕುವೆಂಪು ವೃತ್ತ, ಧರ್ಮರಾಯಸ್ವಾಮಿ ದೇವಾಲಯ, ಅಗ್ರಹಾರ ಬೀದಿ, ಕುಂಬಾರಪೇಟೆ ವೃತ್ತ, ದೊಡ್ಡಪೇಟೆ, ಮಹಾರಾಜ ಸರ್ಕಲ್, ಬಾಬುರಾವ್ ರಸ್ತೆ, ಬ್ರಹ್ಮಕುಮಾರಿ ರಸ್ತೆ ಮತ್ತು ಅರಳೇರಿ ಮಾರ್ಗದ ಮೂಲಕ ಮತ್ತೆ ಹೋಂಡಾ ಸ್ಟೇಡಿಯಂನಲ್ಲಿ ಅಂತ್ಯಗೊಳ್ಳಲಿದೆ.
ರಾಜ್ಯಾದ್ಯಂತ ಆರ್‌ಎಸ್‌ಎಸ್ ಶತಮಾನೋತ್ಸವ ಪಥಸಂಚಲನಗಳು ನಡೆಯುತ್ತಿದ್ದು, ಶ್ರೀನಿವಾಸಪುರದಲ್ಲಿ ನಡೆದ ಪಥಸಂಚಲನದ ವೇಳೆ ಕೆಲವು ಘೋಷಣೆಗಳ ವಿವಾದ ಉಂಟಾದ ಹಿನ್ನೆಲೆಯಲ್ಲಿ, ಮಾಲೂರಿನಲ್ಲಿ ಹೆಚ್ಚುವರಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ಹಲವಾರು ಸಂಘಟನೆಯ ಮುಖಂಡರು ಈ ಪಥಸಂಚಲನದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.